ಬಹಳಷ್ಟು ತಪಸ್ಸು ಮಾಡಿ ಈ ದಿನವನ್ನು ಪಡೆದಿದ್ದೇವೆ: ಮಂತ್ರಾಕ್ಷತೆ ಪಡೆದು ಕರಸೇವಕ ಮೊಹಮ್ಮದ್ ಹಬೀಬ್ ಭಾವುಕ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಆಹ್ವಾನ ಪತ್ರಿಕೆಗಳನ್ನು ತಲುಪಿಸುವ ಕೆಲಸ ಭರದಿಂದ ಸಾಗಿದೆ. 
ರಾಮ ಮಂದಿರ
ರಾಮ ಮಂದಿರ

ನವದೆಹಲಿ/ ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಆಹ್ವಾನ ಪತ್ರಿಕೆಗಳನ್ನು ತಲುಪಿಸುವ ಕೆಲಸ ಭರದಿಂದ ಸಾಗಿದೆ. 

ಅಂತೆಯೇ ಅಯೋಧ್ಯೆಯ ಕರಸೇವಕ ಮೊಹಮ್ಮದ್ ಹಬೀಬ್ ಅವರಿಗೂ ರಾಮ ಮಂದಿರ ದೇವಾಲಯದ ಫೋಟೋ ಸಹಿತ ಮಂತ್ರಾಕ್ಷತೆಯನ್ನು ತಲುಪಿಸಲಾಯಿತು. ಆಹ್ವಾನ ಪತ್ರಿಕೆ ಸ್ವೀಕರಿಸಿ ಮೊಹಮ್ಮದ್ ಹಬೀಬ್ ಈ ದಿನಕ್ಕಾಗಿ ಬಳಷ್ಟು ತಪಸ್ಸು ಮಾಡಿದ್ದೇವೆ ಎಂದು ಭಾವುಕರಾಗಿ ನುಡಿದಿದ್ದಾರೆ. 

70 ವರ್ಷದ ಹಬೀಬ್ ಅವರು ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದು, ಕರಸೇವಕರಾಗಿದ್ದರು. ಜ.22 ರಂದು ರಾಮ ಮಂದಿರ ಉದ್ಘಾಟನೆಯ ಬಳಿಕ ಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆಯುವುದಾಗಿ ಹಬೀಬ್ ಹೇಳಿದ್ದಾರೆ. 

1992 ರ ಡಿಸೆಂಬರ್ 2 ರಂದು ತಾವು 4-5 ದಿನಗಳ ಕಾಲ ತಮ್ಮ ತಂಡದವರೊಂದಿಗೆ ಅಯೋಧ್ಯೆಯಲ್ಲಿಯೇ ಇದ್ದದ್ದನ್ನು ಹಬೀಬ್ ಈ ವೇಳೆ ಸ್ಮರಿಸಿದ್ದಾರೆ. ಬಾಬ್ರಿ ಮಸೀದಿ 1992 ರ ಡಿಸೆಂಬರ್ 6 ರಂದು ಕರಸೇವಕರ ಆಕ್ರೋಶಕ್ಕೆ ಗುರಿಯಾಗಿ ಧ್ವಂಸಗೊಂಡಿತ್ತು. 

ಜ.22 ಪ್ರತಿಯೊಬ್ಬರಿಗೂ ಐತಿಹಾಸಿಕ ದಿನವಾಗಿದ್ದು, ಈ ದಿನಕ್ಕಾಗಿ ನಾವು ಬಹಳಷ್ಟು ಹೋರಾಟ ಮಾಡಿದ್ದೇವೆ, ತಪಸ್ಸು ಮಾಡಿದ್ದೇವೆ ಎಂದು ಭಾವುಕರಾಗಿ ನುಡಿದಿದ್ದಾರೆ.

ನಾನು ಬಿಜೆಪಿಯಲ್ಲಿ ದೀರ್ಘಕಾಲದಿಂದ ಇದ್ದೇನೆ, 32 ವರ್ಷಗಳ ಹೋರಾಟಕ್ಕೆ ಈಗ ಫಲ ದೊರೆತಿದೆ. ಶ್ರೀರಾಮ ನನ್ನ ಪೂರ್ವಜ, ನಮ್ಮ ಪೂರ್ವಜರನ್ನು ನೆನೆಯುವುದು ಭಾರತೀಯತೆ ಎಂದು ನಂಬಿದ್ದೇನೆ ಎನ್ನುತ್ತಾರೆ ಹಬೀಬ್. 

ರಾಮ ಮಂದಿರ ನಿರ್ಮಾಣವಾಗುತ್ತಿರುವುದರಿಂದ ಸಂತಸಗೊಂಡಿರುವವರು ಕೇವಲ ಹಬೀಬ್ ಒಬ್ಬರೇ ಅಲ್ಲ. ಹಬೀಬ್ ರೀತಿಯ ಅನೇಕ ಮುಸ್ಲಿಮರು ಸಂತಸಗೊಂಡಿದ್ದಾರೆ. ವಾರಣಾಸಿಯ ಪಕ್ಕದ ಜಿಲ್ಲೆಯ ಮಿರ್ಜಾಪುರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ, ಮುಸ್ಲಿಂ ಮಹಿಳೆಯರ ಕಲ್ಯಾಣಕ್ಕಾಗಿ ಮುಸ್ಲಿಂ ಮಹಿಳಾ ಫೌಂಡೇಶನ್ ನಡೆಸುತ್ತಿರುವ ನಜ್ನೀನ್ ಅನ್ಸಾರಿ, ಆಕೆಯ ಸಹವರ್ತಿ ನಜ್ಮಾ ಸಹ ಅತ್ಯಂತ ಸಂತೋಷಗೊಂಡಿದ್ದಾರೆ. 

ಈ ಇಬ್ಬರೂ ಮಹಿಳೆಯರು ಅಯೋಧ್ಯೆಯಿಂದ ರಾಮ ಜ್ಯೋತಿಯನ್ನು ತಂದು, ವಾರಣಾಸಿಯಲ್ಲಿರುವ ಹಿಂದೂ-ಮುಸ್ಲಿಮರ 400-500 ಕುಟುಂಬಗಳಿಗೆ ವಿತರಿಸುವ ಸಂಕಲ್ಪ ಹೊಂದಿದ್ದಾರೆ.

ನಾವು ಅಯೋಧ್ಯೆಯಿಂದ ಶ್ರೀ ರಾಮ ಜ್ಯೋತಿಯನ್ನು ತಂದು ಕಾಶಿಯಲ್ಲಿರುವ ಹಿಂದೂ-ಮುಸ್ಲಿಮರ ಕುಟುಂಬಗಳಿಗೆ ವಿತರಿಸಿ ಅದನ್ನು ಜ.22 ವರೆಗೂ ಆರದಂತೆ ಬೆಳಗಿಸಲು ಮನವಿ ಮಾಡುತ್ತೇವೆ ಯಾಕೆಂದರೆ ಇಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ರಾಮನು ನಮ್ಮ ಪೂರ್ವಜನಲ್ಲ ಎಂದು ಹೇಳಲು ಸಾಧ್ಯವಿಲ್ಲ. ಭಗವಾನ್ ರಾಮ ಅಣು ಅಣುವಿನಲ್ಲೂ ಇದ್ದಾನೆ, ನಮ್ಮ ಪೂರ್ವಜರನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ, ನಮ್ಮ ಪೂರ್ವಜ ರಾಮ ಅಯೋಧ್ಯೆಯಲ್ಲಿ ಪ್ರತಿಷ್ಠಿತನಾಗುತ್ತಿದ್ದಾನೆ. ಇದಕ್ಕಿಂತಲೂ ಸಂತಸದ ವಿಷಯ ಏನಿದೆ ಎಂದು ನಜ್ಮಾ ಪ್ರಶ್ನಿಸಿದ್ದಾರೆ.

ನಜ್ನೀನ್ ಅನ್ಸಾರಿ ಅವರು "ರಾಮ ಮಂದಿರದ ಹೆಸರನ್ನು ತೆಗೆದುಕೊಳ್ಳಲು ಭಯಪಡುವ ದ್ವೇಷದ ದಿನಗಳನ್ನೂ ನೋಡಿದ್ದೇವೆ. ಮತ್ತು ಇಂದು ನಾವು ರಾಮಮಂದಿರ ನಿರ್ಮಾಣದಿಂದಾಗಿ ದೇಶದಾದ್ಯಂತ ಸಂತೋಷವನ್ನು ಕಾಣುತ್ತಿದ್ದೇವೆ. ಅದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ನಜ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com