ಶಿಂಧೆ ಬಣವೇ 'ನಿಜವಾದ ಶಿವಸೇನೆ' ಎಂದು ಮಹಾರಾಷ್ಟ್ರ ಸ್ಪೀಕರ್ ತೀರ್ಪು; ಶಾಸಕರ ಅನರ್ಹತೆ ತಿರಸ್ಕಾರ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ 'ನಿಜವಾದ ಶಿವಸೇನೆ' ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದು, ಮಾಜಿ ಸಿಎಂ ಮತ್ತು ಯುಬಿಟಿ ಬಣದ ನಾಯಕ ಉದ್ಧವ್ ಠಾಕ್ರೆ...
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ 'ನಿಜವಾದ ಶಿವಸೇನೆ' ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದು, ಮಾಜಿ ಸಿಎಂ ಮತ್ತು ಯುಬಿಟಿ ಬಣದ ನಾಯಕ ಉದ್ಧವ್ ಠಾಕ್ರೆ ಅವರಿಗೆ ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕುವ "ಅಧಿಕಾರ ಇಲ್ಲ" ಎಂದು ಹೇಳಿದ್ದಾರೆ.

2022 ರಲ್ಲಿ ಶಿವಸೇನಾದಲ್ಲಿ ಒಡಕುವುಂಟಾಗಿ ಎರಡು ಬಣಗಳಾಗಿ ವಿಭಜನೆ ಆಗಿ 18 ತಿಂಗಳ ನಂತರ ಇಂದು ಸಂಜೆ ಸ್ಪೀಕರ್ ರಾಹುಲ್ ಅವರು ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸಿದ್ದು, ಶಿಂಧೆ ಅವರ ಬಣವೇ "ನಿಜವಾದ" ಶಿವಸೇನೆ ಎಂದು ಹೇಳಿದ್ದಾರೆ. ಅಲ್ಲದೆ ಸಿಎಂ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಠಾಕ್ರೆ ಬಣದ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.

ಸಿಎಂ ಏಕನಾಥ್ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ಅನರ್ಹತೆಯ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿರುವ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ನಾಯಕತ್ವದ ರಚನೆಯನ್ನು ನಿರ್ಧರಿಸಲು ಪಕ್ಷದ 2018 ರ ಸಂವಿಧಾನವನ್ನು ಉಲ್ಲೇಖಿಸಿದ್ದಾರೆ. 

ಚುನಾವಣಾ ಆಯೋಗ ಒದಗಿಸಿದ ಶಿವಸೇನಾ ಸಂವಿಧಾನವು ನಿಜವಾದ ಸಂವಿಧಾನವಾಗಿದೆ, ಇದನ್ನು ಎಸ್ಎಸ್ ಸಂವಿಧಾನ ಎಂದು ಕರೆಯಲಾಗುತ್ತದೆ ಎಂದು ಸ್ಪೀಕರ್ ಹೇಳಿದ್ದು ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದಿದ್ದಾರೆ.

ಶಿವಸೇನಾದ ಎರಡು ಬಣಗಳು ಚುನಾವಣಾ ಆಯೋಗಕ್ಕೆಗೆ ಸಲ್ಲಿಸಿದ ಸಂವಿಧಾನದ ಬಗ್ಗೆ ಯಾವುದೇ ಒಮ್ಮತವಿಲ್ಲ. ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಏಕೈಕ ಅಂಶವೆಂದರೆ ಶಾಸಕಾಂಗ ಪಕ್ಷದಲ್ಲಿ ಬಹುಮತ. ವಿವಾದದ ಮೊದಲು ಅಸ್ತಿತ್ವದಲ್ಲಿದ್ದ ನಾಯಕತ್ವ ರಚನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಸಂಬಂಧಿತ ಸಂವಿಧಾನವನ್ನು ನಾನು ನಿರ್ಧರಿಸಬೇಕಾಗಿದೆ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ  ಏಕನಾಥ್ ಶಿಂಧೆಯನ್ನು ನಾಯಕ ಸ್ಥಾನದಿಂದ ತೆಗೆದುಹಾಕುವ ಹಕ್ಕು ಹೊಂದಿಲ್ಲ. ಶಿವಸೇನೆಯ ಯಾವುದೇ ಸದಸ್ಯರನ್ನು ತೆಗೆದುಹಾಕುವ ಹಕ್ಕು ಉದ್ಧವ್‌ಗೆ ಇಲ್ಲ. ಶಿಂಧೆ ಅವರನ್ನು ಪದಚ್ಯುತಗೊಳಿಸಲು ಉದ್ಧವ್‌ ಅವರಿಗೆ ಬಹುಮತ ಬೇಕು, ಅದು ಅವರ ಬಳಿ ಇಲ್ಲ. ಒಬ್ಬ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕಾಗಿ ಅವರು ಯಾರನ್ನಾದರೂ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com