ಸತ್ತುಹೋಯಿತೇ ಮಾನವೀಯತೆ: ಸಹಾಯಕ್ಕೆ ಬಾರದ ವೈದ್ಯರು; ಕೊರೆವ ಚಳಿಯಲ್ಲೇ ತರಕಾರಿ ಗಾಡಿಯಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ!

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರು ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡಿಗಢ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರು ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

ಕೊರೆಯುವ ಚಳಿಯಲ್ಲೇ ಮಹಿಳೆ ಹಾಗೂ ಕುಟುಂಬಸ್ಥರು ಬೇಡಿಕೊಳ್ಳುತ್ತಿದ್ದರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಮಹಿಳೆ ಆಸ್ಪತ್ರೆ ಆವರಣದಲ್ಲಿ ಇರಿಸಲಾಗಿದ್ದ ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಕೆಲ ಸಮಯದ ನಂತರ ಆಕೆಯೆನ್ನ ಆಸ್ಪತ್ರೆಯೊಳಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತ ಮಹಿಳೆ ಪಂಜಾಬ್‌ನ ಮೊಹಾಲಿ ಜಿಲ್ಲೆಯ ದಪ್ಪರ್‌ನ ನಿವಾಸಿಯಾಗಿದ್ದಾರೆ. ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಆಕೆಯನ್ನ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಂಗಲಾಚಿ ಬೇಡಿಕೊಂಡರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ. ಆಕೆಗೆ ಸ್ಟ್ರೆಚರ್‌ ಕೊಡುವುದಕ್ಕೂ ಸಿದ್ಧರಿರಲಿಲ್ಲ. ಕೊನೆಗೆ ಆಸ್ಪತ್ರೆ ಗೇಟ್‌ ಬಳಿಯೇ ತಳ್ಳುಗಾಡಿಯಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ.

ನಂತರ ವೈದ್ಯರು ಪ್ರಾಣಾಪಾಯವಾಗಬಹುದು ಎಂದು ಹೆದರಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಯೊಳಕ್ಕೆ ಕರೆದೊಯ್ದು ವಾರ್ಡ್‌ನಲ್ಲಿ ದಾಖಲಿಸಿದ್ದಾರೆ. ನಂತರ ಈ ಬಗ್ಗೆ ಮಾತನಾಡಿದ ಮಹಿಳೆಯ ಪತಿ, ಆ ದೇವರೇ ನನ್ನ ಪತ್ನಿ ಮತ್ತು ಮಗುವನ್ನು ರಕ್ಷಿಸಿದ್ದಾನೆ. ನಾನು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ದೇವರೆಂದು ಭಾವಿಸಿದ್ದೆ, ಆದ್ರೆ ಇಲ್ಲಿನ ಘಟನೆ ನೋಡಿ ವೈದ್ಯರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೂ ವರದಿ ಮಾಡಲಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ. ನಾವು ಆಂಬ್ಯುಲೆನ್ಸ್ ಮತ್ತು ಉಚಿತ ವಿತರಣಾ ಸೇವೆಯನ್ನು ಒದಗಿಸುತ್ತೇವೆ. ನಾವೂ ಎಲ್ಲವನ್ನೂ ತನಿಖೆ ಮಾಡುತ್ತೇನವೆ. ಯಾವುದೇ ನಿರ್ಲಕ್ಷ್ಯ ಕಂಡುಬಂದರೆ, ಕ್ರಮ ತೆಗೆದುಕೊಳ್ಳಲಾಗುವುದು ಶ್ರೀ ವಿಜ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com