ರಾಜ್ಯದ ಸಚಿವರು ದೆಹಲಿಗೆ ಪ್ರಯಾಣ: ಕಾಂಗ್ರೆಸ್ ಸಭೆ, ಲೋಕಸಭೆ ಚುನಾವಣೆ ಕಾರ್ಯತಂತ್ರ ಕುರಿತು ಚರ್ಚೆ

ಲೋಕಸಭೆ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ವರಿಷ್ಠರು ಕರೆದಿರುವ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಸಚಿವರು ಗುರುವಾರ ನವದೆಹಲಿಗೆ ತೆರಳಿದ್ದಾರೆ.
ಕಾಂಗ್ರೆಸ್ ಸಭೆ
ಕಾಂಗ್ರೆಸ್ ಸಭೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ವರಿಷ್ಠರು ಕರೆದಿರುವ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಸಚಿವರು ಗುರುವಾರ ನವದೆಹಲಿಗೆ ತೆರಳಿದ್ದಾರೆ.

ಸಚಿವರಾದ ಕೆ. ಎನ್ ರಾಜಣ್ಣ, ಕೆಜೆ ಜಾರ್ಜ್, ಬಿ ಝಡ್ ಜಮೀರ್ ಅಹಮದ್ ಖಾನ್, ಡಾ. ಜಿ. ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್, ಎನ್ ಎಸ್ ಬೋಸರಾಜು ಮತ್ತು ಆರ್ ಬಿ ತಿಮ್ಮಾಪುರ್ ಅವರು ಬೆಳಗ್ಗೆಯೇ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 

29 ಸಚಿವರನ್ನು ದೆಹಲಿಗೆ ಕರೆಸಿ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸರಿಯಾದ ಅಭ್ಯರ್ಥಿಗಳನ್ನು ಗುರುತಿಸುವುದು, ರಾಮ ಮಂದಿರ ಸಮಸ್ಯೆ ಎದುರಿಸಲು ಮಾರ್ಗಗಳನ್ನು ಕಂಡುಕೊಳ್ಳುವುದು, ಅದು ಕರ್ನಾಟಕದಲ್ಲಿ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಸಭೆಯ ಪ್ರಮುಖ ಅಂಶಗಳಾಗಿವೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಮತ್ತಿತರ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಮಂತ್ರಿಗಳಿಗೆ ಸೂಚಿಸಲಾಗುತ್ತದೆ. ಐದು ಗ್ಯಾರಂಟಿಗಳೇ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪ್ರಮುಖ ಶಕ್ತಿ. ಇದು ಬೇರೆ ಯಾವುದೇ ರಾಜ್ಯಗಳು ಜಾರಿಗೆ ತಂದಿಲ್ಲ. ರಾಮ ಮಂದಿರ ಚರ್ಚೆಗೆ ಬರಬಹುದಾದರೂ, ಪಕ್ಷವು ಅದರ ಬಗ್ಗೆ ಅನಗತ್ಯವಾಗಿ ಚಿಂತಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನಾಲ್ವರು ಶಂಕರಾಚಾರ್ಯರು ಹಾಜರಾಗದಿರುವ ಹಿನ್ನೆಲೆಯಲ್ಲಿ ಹಿಂದೂ ಸಮುದಾಯವೇ ವಿಭಜನೆಗೊಂಡಿರುವುದರಿಂದ ರಾಮಮಂದಿರದ ವಿಚಾರದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು ಎಂಬ ಕೆಲವು ಸಚಿವರ ಬೇಡಿಕೆ ಸಭೆಯಲ್ಲಿ ಚರ್ಚೆಗೆ ಬರುವುದಿಲ್ಲ. ಚುನಾವಣೆ ಮುಗಿಯುವವರೆಗೆ ಈ ವಿಷಯವನ್ನು ಪ್ರಸ್ತಾಪಿಸಬೇಡಿ ಎಂದು ಪಕ್ಷದ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 28 ಕ್ಷೇತ್ರಗಳ ಪೈಕಿ ಕೇವಲ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ನೀರಸ ಪ್ರದರ್ಶನ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com