ನಾಸಿಕ್: ಜ.22 ರಂದು ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇಂದಿನಿಂದ (ಜ.12 ರಿಂದ) ಪ್ರಧಾನಿ ಮೋದಿ ಉಪವಾಸ ವ್ರತ ಕೈಗೊಂಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಾಲಯದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಉಪವಾಸ ವ್ರತಕ್ಕೆ ಚಾಲನೆ ನೀಡಿದರು.
ಉಪವಾಸಕ್ಕೂ ಮುನ್ನ ನಾಸಿಕ್ ಗೆ ಭೇಟಿ ನೀಡಿದ್ದೇಕೆ?
ಭಗವಾನ್ ರಾಮ ಲಕ್ಷ್ಮಣ, ಸೀತೆ 14 ವರ್ಷಗಳ ವನವಾಸ ಆರಂಭಿಸಿದಾಗ ಹೆಚ್ಚಿನ ಸಮಯವನ್ನು ದಂಡಾಕರಣ್ಯದಲ್ಲಿ ಕಳೆದಿದ್ದರು. ಪ್ರಮುಖವಾಗಿ, ಪಂಚವಟಿಯಲ್ಲಿ ಪರ್ಣ ಕುಟೀರದಲ್ಲಿ ಜೀವನ ಸಾಗಿಸುತ್ತಿದ್ದರು.ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಾಮ ಮಂದಿರದ ಉದ್ಘಾಟನೆಗೆ ಇನ್ನು 11 ದಿನಗಳಷ್ಟೇ ಬಾಕಿ ಇದೆ. ಈ ಪ್ರಮುಖ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗುತ್ತಿರುವುದು ನನ್ನ ಅದೃಷ್ಟ. ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ವೇಳೆ ಭಾರತದ ಜನತೆಯನ್ನು ಪ್ರತಿನಿಧಿಸುವುದಕ್ಕೆ ಭಗವಾನ್ ರಾಮ ನನ್ನನ್ನು ನಿಮಿತ್ತವಾಗಿಸಿದ್ದಾನೆ.
“ಇದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಉಪವಾಸ ವ್ರತವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ಎಲ್ಲ ಜನರ ಆಶೀರ್ವಾದವನ್ನು ಕೇಳುತ್ತಿದ್ದೇನೆ. ಈ ಕ್ಷಣದಲ್ಲಿ, ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ ”ಎಂದು ಅವರು ಹೇಳಿದರು.
Advertisement