ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ
ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ

ಮಹಾರಾಷ್ಟ್ರ: ಕಾಂಗ್ರೆಸ್ ತೊರೆಯುವ ವದಂತಿ ತಳ್ಳಿಹಾಕಿದ ದಿಯೋರಾ!

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಪಕ್ಷವನ್ನು ತೊರೆಯಲಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳನ್ನು ಶನಿವಾರ ತಳ್ಳಿ ಹಾಕಿದರು.

ಮುಂಬೈ: ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಪಕ್ಷವನ್ನು ತೊರೆಯಲಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳನ್ನು ಶನಿವಾರ ತಳ್ಳಿ ಹಾಕಿದರು. ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ  ಶಿವಸೇನೆ-ಉದ್ಧವ್ ಠಾಕ್ರೆ ಅವರ ಹೇಳಿಕೆ ಕುರಿತು ಇತ್ತೀಚಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ದಿಯೋರಾ, ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದರು. 

ತಮ್ಮ ಬೆಂಬಲಿಗರೊಂದಿಗೆ ಯೋಜನೆ ರೂಪಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದಿಯೋರಾ,  ನನ್ನ ಬೆಂಬಲಿಗರ ಮಾತನ್ನು ಕೇಳುತ್ತಿದ್ದೇನೆ. ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಕಾಂಗ್ರೆಸ್ ತೊರೆದಿದ್ದಾರೆ ಎಂಬ ಕೆಲ ಮಾಧ್ಯಮಗಳ ವರದಿಗಳು ಕೇವಲ ವದಂತಿ ಎಂದರು.

ಲೋಕಸಭಾ ಚುನಾವಣೆಯಲ್ಲಿ ದಿಯೋರಾ ಪ್ರತಿನಿಧಿಸುತ್ತಿದ್ದ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಉದ್ಧವ್ ಠಾಕ್ರೆ ನೇತೃತ್ವದ ಗುಂಪಿನ ಹೇಳಿಕೆ ನಂತರ ಅವರು ಅಸಮಾಧಾನಗೊಂಡಿದ್ದರು. ಇಂತಹ ಹೇಳಿಕೆಯನ್ನು ಮೈತ್ರಿಪಕ್ಷ ನಿಲ್ಲಿಸಬೇಕು, ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಕೂಡಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು ಎಂದು ಕಳೆದ ಭಾನುವಾರ ವೀಡಿಯೊವೊಂದರಲ್ಲಿ ದಿಯೋರಾ ಹೇಳಿಕೆ ನೀಡಿದ್ದರು.  

ಮಹಾ ವಿಕಾಸ್ ಅಘಾಡಿಯಲ್ಲಿ ಶಿವಸೇನೆ-ಯುಬಿಟಿ, ಕಾಂಗ್ರೆಸ್ ಮತ್ತು ಎನ್ ಸಿಪಿ (ಶರದ್ ಪವಾರ್ ಬಣ) ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿವೆ. ಸೀಟು ಹಂಚಿಕೆ ಕುರಿತ ಮಾತುಕತೆಗಳು ಇನ್ನೂ ಮುಗಿಯದ ಕಾರಣ, ಯಾರೂ ಆ ಬಗ್ಗೆ ಹೇಳಿಕೆ ನೀಡಬಾರದು ಎಂದು ದಿಯೋರಾ ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮುರಳಿ ದೇವ್ರಾ ಅವರ ಪುತ್ರ ಆಗಿರುವ  ದಿಯೋರಾ 2004 ಮತ್ತು 2009ರಲ್ಲಿ ಮುಂಬೈ ದಕ್ಷಿಣ ಕ್ಷೇತ್ರವನ್ನು ಗೆದ್ದಿದ್ದರು.  2014 ಮತ್ತು 2019 ಚುನಾವಣೆಗಳಲ್ಲಿ ಶಿವಸೇನಾ (ಅವಿಭಜಿತ) ನಾಯಕ ಅರವಿಂದ್ ಸಾವಂತ್ ವಿರುದ್ಧ ಸೋತಿದ್ದರು. ಅವರ ಕುಟುಂಬವು 50 ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಯಾವುದೇ 'ಅಲೆ'ಯಲ್ಲಿ ಚುನಾಯಿತರಾಗಿಲ್ಲ ಎಂದು ದಿಯೋರಾ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com