ರಾಮಮಂದಿರ ಪ್ರಾಣಪ್ರತಿಷ್ಠಾಪನೆ ವಿಧಿಗಳಿಗೆ ಇಂದು ಚಾಲನೆ
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ವಿಧಿಗಳಿಗೆ ಇಂದಿನಿಂದ ಚಾಲನೆ ಸಿಗಲಿದೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಜ.18 ರಂದು ರಾಮಲಲ್ಲಾ ನ ವಿಗ್ರಹವನ್ನು ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ.
ಜ.22 ರಂದು ಮಧ್ಯಾಹ್ನ 12:20 ರ ವೇಳೆಗೆ ಅಭಿಜಿನ್ ಮಹೂರ್ತದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್, ರಾಜ್ಯಪಾಲ ಆನಂದಿ ಬೆನ್ ಪಟೇಲ್, ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತು ಎಲ್ಲಾ ಟ್ರಸ್ಟಿಗಳು ಗರ್ಭಗುಡಿಯಲ್ಲಿ ಉಪಸ್ಥಿತರಿರುವರು ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಚಂಪತ್ ರೈ, ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಾಣಪ್ರತಿಷ್ಠಾಪನೆಯ ಸಮಯವನ್ನು ವಾರಣಾಸಿಯ ಪುರೋಹಿತರಾದ ಗಣೇಶ್ವರ ಶಾಸ್ತ್ರಿಗಳು ನಿರ್ಧರಿಸಿದ್ದಾರೆ. ಅದೇ ಸಮಯದಲ್ಲಿ, ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಸಂಪೂರ್ಣ ಧಾರ್ಮಿಕ ವಿಧಾನಗಳನ್ನು ವಾರಣಾಸಿಯ ಲಕ್ಷ್ಮೀಕಾಂತ್ ದೀಕ್ಷಿತ್ ನೆರವೇರಿಸಲಿದ್ದಾರೆ ಎಂದು ಚಂಪತ್ ರಾಯ್ ಹೇಳಿದ್ದಾರೆ.
ಜ.16 ರಿಂದ ಅಯೋಧ್ಯೆಯ ಮಂದಿರಲ್ಲಿ ಪ್ರತಿಷ್ಠಾಪನಾ ಪೂರ್ವಕ ಪೂಜೆಗಳು ಆರಂಭವಾಗಲಿದ್ದು ಜ.21 ರ ವರೆಗೆ ನಡೆಯಲಿದೆ. ವಿಗ್ರಹದ ಅಂದಾಜು ತೂಕ 150 ರಿಂದ 200 ಕೆ.ಜಿ. ಇದ್ದು, 5 ವರ್ಷದ ಬಾಲಕನ ರೂಪದಲ್ಲಿರುವ ಭಗವಾನ್ ರಾಮನ ವಿಗ್ರಹ ನಿಂತಿರುವ ಭಂಗಿಯಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ