ಬಿಲ್ಕಿಸ್ ಬಾನೋ ಪ್ರಕರಣ: ಶರಣಾಗಲು ಹೆಚ್ಚುವರಿ ಸಮಯಾವಕಾಶ ಇಲ್ಲ; ಅಪರಾಧಿಗಳಿಗೆ 'ಸುಪ್ರೀಂ' ಶಾಕ್!

ಶರಣಾಗತಿಗೆ ಕಾಲಾವಕಾಶ ಕೋರಿ ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌  ಶುಕ್ರವಾರ ವಜಾಗೊಳಿಸಿದೆ. ಭಾನುವಾರದ ಒಳಗೆ ಶರಣಾಗುವಂತೆ ಸೂಚನೆ ನೀಡಿದೆ.
ಬಿಲ್ಕಿಸ್ ಬಾನು
ಬಿಲ್ಕಿಸ್ ಬಾನು
Updated on

ನವದೆಹಲಿ: ಶರಣಾಗತಿಗೆ ಕಾಲಾವಕಾಶ ಕೋರಿ ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌  ಶುಕ್ರವಾರ ವಜಾಗೊಳಿಸಿದೆ. ಭಾನುವಾರದ ಒಳಗೆ ಶರಣಾಗುವಂತೆ ಸೂಚನೆ ನೀಡಿದೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿತು. ಕುಟುಂಬದವರ ವಿವಾಹ, ಪೋಷಕರ ಜವಾಬ್ದಾರಿ ಕಾರಣ ನೀಡಿ ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್‌ ಪರಿಗಣಿಸಿಲ್ಲ, ಪ್ರಕರಣದ 11 ಅಪರಾಧಿಗಳು ಅಧಿಕಾರಿಗಳ ಮುಂದೆ ಶರಣಾಗುವಂತೆ ತಿಳಿಸಿದೆ.

ತನ್ನ ಹಳೆಯ ಆದೇಶದ ಪ್ರಕಾರ, ಎಲ್ಲಾ ಆರೋಪಿಗಳು ಜನವರಿ 21 ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು ತಮ್ಮ ಸ್ವಂತ ಆರೋಗ್ಯ ಮತ್ತು ತಮ್ಮ ವೃದ್ಧ ತಂದೆ ತಾಯಿ ಸೇರಿದಂತೆ ಹಲವು ಕೌಟುಂಬಿಕ ಜವಾಬ್ದಾರಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಉಲ್ಲೇಖಿಸಿದ್ದರು.

2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಈ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಶರಣಾಗಲು ಸಮಯ ಕೋರಿ ಸಲ್ಲಿಸಿದ್ದ ಅಪರಾಧಿಗಳು, ವಿವಿಧ ಕಾರಣಗಳನ್ನು ನೀಡಿದ್ದರು. ವೃದ್ಧ ತಂದೆ ತಾಯಿ ತಮ್ಮನ್ನು ಅವಲಂಬಿಸಿದ್ದು, ಬೆಳೆದು ನಿಂತಿರುವ ಬೆಳೆಯನ್ನು ಕಟಾವು ಮಾಡಬೇಕು ಎಂದು ಒಬ್ಬ ಅಪರಾಧಿ ಹೇಳಿದ್ದರೆ, ಮತ್ತೊಬ್ಬ ಅಪರಾಧಿ ತನ್ನ ಮಗನ ಮದುವೆ ಕಾರ್ಯ ಇರುವುದರಿಂದ ಹೆಚ್ಚುವರಿ ಸಮಯ ನೀಡುವಂತೆ ಕೋರಿದ್ದ. ಇನ್ನು ಕೆಲವರು ತಮ್ಮ ಅನಾರೋಗ್ಯ ಹಾಗೂ ಇತ್ತೀಚಿನ ಸರ್ಜರಿಗಳ ನೆಪ ಮುಂದಿಟ್ಟಿದ್ದರು. ಆದರೆ ಇದಾವುದೂ, ಶರಣಾಗತಿ ಮನವಿಯನ್ನು ಪುರಸ್ಕರಿಸಲು ಅರ್ಹ ಕಾರಣಗಳಲ್ಲ ಎಂದು ನ್ಯಾಯಪೀಠ ಹೇಳಿದೆ.

2002ರ ಗುಜರಾತ್‌ನ ಗೋದ್ರಾ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಈ ಕ್ರೂರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿದ್ದ 11 ಮಂದಿಯ ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಲಾಗಿತ್ತು. ಆದರೆ ಶಿಕ್ಷೆ ಅವಧಿ ಮುಗಿಯುವುದಕ್ಕೂ ಮುನ್ನವೇ ಗುಜರಾತ್ ಸರ್ಕಾರವು ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅವರನ್ನು 'ಸನ್ನಡತೆ' ಆಧಾರದಲ್ಲಿ ಬಿಡುಗಡೆ ಮಾಡಿತ್ತು. ಈ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು. ಇದರ ವಿರುದ್ಧ ಬಿಲ್ಕಿಸ್ ಬಾನು ಮತ್ತೊಂದು ಸುತ್ತಿನ ಕಾನೂನು ಹೋರಾಟ ನಡೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com