ಗೋಧ್ರಾ ಹತ್ಯಾಕಾಂಡದಲ್ಲಿ ಮೃತಪಟ್ಟಿದ್ದ 19 ಕರಸೇವಕರ ಕುಟುಂಬಗಳಿಗೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ

ಗುಜರಾತ್‌ನಲ್ಲಿ 2002ರಲ್ಲಿ ಗೋಧ್ರಾ ರೈಲು ಬೆಂಕಿಯಲ್ಲಿ ಪ್ರಾಣ ಕಳೆದುಕೊಂಡ 59 ಜನರ ಪೈಕಿ 19 ಕರಸೇವಕರ ಕುಟುಂಬಗಳು ಅಯೋಧ್ಯೆಯಲ್ಲಿ ಭಗವಾನ್ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಗೋದ್ರಾ ರೈಲಿಗೆ ಬೆಂಕಿ
ಗೋದ್ರಾ ರೈಲಿಗೆ ಬೆಂಕಿ

ಅಹಮದಾಬಾದ್: ಗುಜರಾತ್‌ನಲ್ಲಿ 2002ರಲ್ಲಿ ಗೋಧ್ರಾ ರೈಲು ಬೆಂಕಿಯಲ್ಲಿ ಪ್ರಾಣ ಕಳೆದುಕೊಂಡ 59 ಜನರ ಪೈಕಿ 19 ಕರಸೇವಕರ ಕುಟುಂಬಗಳು ಅಯೋಧ್ಯೆಯಲ್ಲಿ ಭಗವಾನ್ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ವಿಎಚ್‌ಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗುಜರಾತ್‌ನ ಇತರ ಆಹ್ವಾನಿತರಲ್ಲಿ 320 ಸಂತರು ಮತ್ತು 105 ಗಣ್ಯರು ಸೇರಿದ್ದಾರೆ ಎಂದು ಅವರು ಹೇಳಿದರು.

ಗೋಧ್ರಾ ರೈಲು ನಿಲ್ದಾಣದ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಮೃತಪಟ್ಟ ಕರಸೇವಕರ ಕುಟುಂಬದವರೂ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನಿತರಾಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಗುಜರಾತ್ ಪ್ರಧಾನ ಕಾರ್ಯದರ್ಶಿ ಅಶೋಕ್ ರಾವಲ್ ಹೇಳಿದ್ದಾರೆ. ಈ ಕರಸೇವಕರು ಅಯೋಧ್ಯೆಯಿಂದ ಅಹಮದಾಬಾದ್‌ಗೆ ಹಿಂತಿರುಗುತ್ತಿದ್ದರು.

39 ಕರಸೇವಕರ ಪೈಕಿ 20 ಮಂದಿ ಕರಸೇವಕರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ವಿಎಚ್‌ಪಿಗೆ ಸಾಧ್ಯವಾಯಿತು. ಅವರ ಸಂಪರ್ಕ ವಿವರಗಳು ಲಭ್ಯವಿದೆ ಎಂದು ಅವರು ಹೇಳಿದರು. ಇವರಲ್ಲಿ 19 ಮಂದಿ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಎಚ್‌ಪಿ 225 ಕೋಟಿ ರೂಪಾಯಿ ಸಂಗ್ರಹಿಸಿ ಕೊಡುಗೆ ನೀಡಿದೆ ಎಂದು ರಾವಲ್ ಹೇಳಿಕೊಂಡಿದ್ದಾರೆ.

ಫೆಬ್ರವರಿ 2002ರಲ್ಲಿ ರೈಲಿಗೆ ಬೆಂಕಿಯಿಟ್ಟ ಘಟನೆಯಲ್ಲಿ 59 ಕರಸೇವಕರ ಸಾವು ಗುಜರಾತ್ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಕೋಮು ಗಲಭೆಗೆ ಕಾರಣವಾಯಿತು. ಇದರಲ್ಲಿ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ಕೆಡವಲಾದ ನಂತರ 2002ರ ಫೆಬ್ರವರಿ 27ರಂದು ಗುಜರಾತ್‌ನಲ್ಲಿ ನಡೆದ ಗೋಧ್ರಾ ರೈಲಿಗೆ ಬೆಂಕಿಯ ಘಟನೆಯು ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ. ಈ ದಿನ, ಗೋಧ್ರಾ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದರು. ಅದರಲ್ಲಿ 59 ಕರಸೇವಕರು ಸುಟ್ಟು ಕರಕಲಾದರು. ಇವುಗಳಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com