ಕಲ್ಪನಾ ಸೊರೆನ್ ಜಾರ್ಖಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿ? ಹೇಮಂತ್ ಸೊರೆನ್ ಪತ್ನಿ ಬಗ್ಗೆ ಇಲ್ಲಿದೆ ಮಾಹಿತಿ!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರ ಬಂಧನವಾದರೆ, ಅವರ ಪತ್ನಿ ಕಲ್ಪನಾ ಸೊರೆನ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎನ್ನುವ ಮಾಹಿತಿ ಕೇಳಿಬಂದಿದೆ.
ಕಲ್ಪನಾ ಸೊರೆನ್
ಕಲ್ಪನಾ ಸೊರೆನ್

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರ ಬಂಧನವಾದರೆ, ಅವರ ಪತ್ನಿ ಕಲ್ಪನಾ ಸೊರೆನ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎನ್ನುವ ಮಾಹಿತಿ ಕೇಳಿಬಂದಿದೆ.

ಭೂಮಿ ಅವ್ಯವಹಾರ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವ ಪೂರ್ವದಲ್ಲಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ 40 ಗಂಟೆಗಳ ಕಾಲ ಕಣ್ಮರೆಯಾಗಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಂಧನದ ಭೀತಿಯಲ್ಲಿರುವ ಸೊರೇನ್ ತಮ್ಮ ಪತ್ನಿ ಕಲ್ಪನಾ ಸೊರೇನ್ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಲ್ಪನಾ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರುವವರಲ್ಲ ಹಾಗೂ ಮೂಲತಃ ಒಡಿಶಾದ ಮಯೂರ್ಗಂಜ್ ಜಿಲ್ಲೆಯವರು. 48 ವರ್ಷದ ಕಲ್ಪನಾ ಅವರು ರಾಂಚಿಯಲ್ಲಿ 1976 ರಲ್ಲಿ ಜನಿಸಿದರು. ಅವರು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಮೂಲದ ವ್ಯಾಪಾರ ಕುಟುಂಬದಿಂದ ಬಂದವರು. ಆಕೆಯ ಕುಟುಂಬವು ಮಯೂರ್‌ಭಂಜ್‌ನಲ್ಲಿ ಇನ್ನೂ ವಾಸಿಸುತ್ತಿದೆ.

2006ರ ಫೆಬ್ರುವರಿ 7ರಂದು ಅವರು ಹೇಮಂತ್  ಸೊರೇನ್ ಅವರನ್ನು ವಿವಾಹವಾಗಿದ್ದು, ಇವರಿಗೆ ನಿಖಿಲ್ ಹಾಗೂ ಅಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಲ್ಪನಾ ಸೊರೆನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು, ನಂತರ ಎಂಬಿಎ ಮಾಡಿದರು. ಕಲ್ಪನಾ ಅವರ ತಂದೆ ಉದ್ಯಮಿ ಹಾಗೂ ತಾಯಿ ಗೃಹಿಣಿ. ಕಲ್ಪನಾ ಅವರು ವ್ಯಾಪಾರ- ವ್ಯವಹಾರ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲ್ಪನಾ ಶಾಲೆಯನ್ನು ನಡೆಸುತ್ತಿದ್ದು, ಸಾವಯವ ಕೃಷಿ ಮಾಡುತ್ತಿದ್ದಾರೆ.

ಕಳೆದ ವರ್ಷದವರೆಗೂ ಸಕ್ರಿಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಕಲ್ಪನಾ ಸೊರೆನ್, ಇತ್ತೀಚೆಗೆ ಪ್ರಕರಣದಲ್ಲಿ ಪತಿ ಹೆಸರು ಕಾಣಿಸಿಕೊಂಡ ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಅವರ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಪನಾ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಎಂದು ಹೇಳಲಾಗುತ್ತಿದೆ, ಆದರೆ  ರಾಜಕೀಯ ಕುಟುಂಬದಲ್ಲಿ ವಿವಾಹವಾಗಿರುವುದರಿಂದ ಕಲ್ಪನಾ ಸೊರೆನ್ ಅವರಿಗೆ ಅವಕಾಶ ನೀಡಿದರೆ ರಾಜ್ಯದಲ್ಲಿ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಹಲವರು ನಂಬುತ್ತಾರೆ.

ಹೇಮಂತ್ ಸೊರೆನ್ ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಕೈಗಾರಿಕಾ ಪ್ರದೇಶದಲ್ಲಿ ತಮ್ಮ ಪತ್ನಿ ಒಡೆತನದ ಕಂಪನಿಗೆ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಸಿಎಂ ರಘುಬರ್ ದಾಸ್ ಆರೋಪಿಸಿದ್ದರು.

ಆದರೆ, ಕಲ್ಪನಾ ಸಿಎಂ ಆಗುವ ಪ್ರಸ್ತಾಪಕ್ಕೆ ಹೇಮಂತ್ ಸಹೋದರ ಬಸಂತ್ ಸೊರೆನ್  ಹಾಗೂ  ದುರ್ಗಾ ಸೊರೆನ್ ಪತ್ನಿ ಸೀತಾ ಸೊರೆನ್ ಒಪ್ಪಿಗೆ ನೀಡಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಿಶಿಕಾಂತ್ ದುಬೆ ಹೇಳಿದ್ದಾರೆ. ಆದರೆ ಇದನ್ನು ಸೊರೇನ್ ಸಹೋದರ ಬಸಂತ್  ಅಲ್ಲಗಳೆದಿದ್ದು, ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ, ಜಾರ್ಖಂಡ್ ಮುಕ್ತಿ ಮೋರ್ಚಾ ಕುಟುಂಬ ಸಂಘಟಿತವಾಗಿದೆ. ಸಂಘರ್ಷ ಇರುವುದು ನಿಶಿಕಾಂತ್ ದುಬೆ ಕುಟುಂಬದಲ್ಲಿ ಎಂದು ತಿರುಗೇಟು ನೀಡಿದ್ದಾರೆ.

ಕಲ್ಪನಾ ಶಾಸಕರಲ್ಲದೇ ಇರುವ ಕಾರಣ ಸಿಎಂ ಆದಲ್ಲಿ, ಒಬ್ಬ ಶಾಸಕ ಅವರ ಸ್ಥಾನವನ್ನು ತೆರವುಗೊಳಿಸಬೇಕಾಗುತ್ತದೆ. ಬಿಜೆಪಿಯ ನಿಶಿಕಾಂತ್ ದುಬೆ ಅವರ ಪ್ರಕಾರ, ಹೇಮಂತ್ ಅವರ ಸಹೋದರ ಬಸಂತ್ ಸೊರೇನ್ ಹಾಗೂ ಅತ್ತಿಗೆ ಸೀತಾ ಸೊರೆನ್, ಕಲ್ಪನಾ ಅವರನ್ನು ಸಿಎಂ ಮಾಡುವ ಪ್ರಸ್ತಾವವನ್ನು ವಿರೋಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com