
ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಸಭಾಪತಿ ಜಗದೀಪ್ ಧನ್ ಕರ್ ಮತ್ತು ಕಾಂಗ್ರೆಸ್ ಅಧ್ಯಕ್ಷ, ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈಮಧ್ಯೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛೀಮಾರಿ ಹಾಕಿದ ಪ್ರಸಂಗ ನಡೆಯಿತು. ನೀವು ಸಭಾಪತಿ ಸ್ಥಾನಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನೀವು ಪ್ರತಿ ಬಾರಿಯೂ ಸ್ಥಾನಕ್ಕೆ ಅಗೌರವ ತೋರಬಾರದು. ನಾನು ಏನು ಹೇಳುತ್ತಿದ್ದೇನೆಂದು ಅರ್ಥಮಾಡಿಕೊಳ್ಳದೆ ನೀವು ಏಕಾಏಕಿ ನಿಂತು ನಿಮಗೆ ಬೇಕಾದುದನ್ನು ಮಾತನಾಡುತ್ತೀರಿ ಎಂದು ರಾಜ್ಯಸಭಾಧ್ಯಕ್ಷರು ಸಿಟ್ಟಿನಿಂದ ಹೇಳಿದರು.
ಈ ದೇಶದ ಮತ್ತು ಸಂಸದೀಯ ಪ್ರಜಾಪ್ರಭುತ್ವ ಮತ್ತು ರಾಜ್ಯಸಭೆಯ ಕಲಾಪಗಳ ಇತಿಹಾಸದಲ್ಲಿ ಎಂದಿಗೂ ಸದಸ್ಯರು ಅಗೌರವ ತೋರಿಸಿದ ಸಂದರ್ಭ ಉಂಟಾಗಿರಲಿಲ್ಲ. ನಿಮ್ಮ ಘನತೆಯನ್ನು ಹಲವಾರು ಬಾರಿ ನೀವೇ ಹಾಳು ಮಾಡಿಕೊಂಡಿದ್ದೀರಿ, ನಾನು ನಿಮ್ಮ ಘನತೆಯನ್ನು ಕಾಪಾಡಲು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದು ಸಭಾಪತಿಗಳು ಹೇಳಿದರು.
ಈ ವೇಳೆ ಎದ್ದುನಿಂತ ಜೈರಾಮ್ ರಮೇಶ್ ಅವರಿಗೆ ಸಭಾಪತಿಗಳು, ನೀವು ತುಂಬಾ ಬುದ್ಧಿವಂತರು, ತುಂಬಾ ಪ್ರತಿಭಾವಂತರಿದ್ದೀರಿ, ನೀವು ತಕ್ಷಣ ಬಂದು ಖರ್ಗೆ ಅವರ ಸ್ಥಾನದಲ್ಲಿ ಕುಳಿತುಕೊಳ್ಳಬೇಕು. ನೀವು ಅವರ ಕೆಲಸವನ್ನು ಮಾಡುತ್ತಿದ್ದೀರಿ, ನಿಮಗೆ ಅದೇ ಸೂಕ್ತ ಎಂದು ವ್ಯಾಂಗ್ಯವಾಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆಯವರು, ಸೋನಿಯಾಗಾಂಧಿ ಕಡೆ ಕೈ ತೋರಿಸಿ, ನನ್ನನ್ನು ಈ ಸ್ಥಾನಕ್ಕೆ ತಂದವರು ಇಲ್ಲಿ ಕುಳಿತಿದ್ದಾರೆ, ಯಾವ ಜೈರಾಮ್ ರಮೇಶ್ ನನ್ನನ್ನು ಈ ಸ್ಥಾನಕ್ಕೆ ತಂದಿಲ್ಲ ಎಂದರು.
ವರ್ಣ (ಜಾತಿ) ವ್ಯವಸ್ಥೆ ನಿಮ್ಮ ಮನಸ್ಸಿನಲ್ಲಿ ಇನ್ನೂ ಇದೆ, ಅದಕ್ಕಾಗಿಯೇ ನೀವು ರಮೇಶ್ ಅವರನ್ನು ತುಂಬಾ ಬುದ್ಧಿವಂತ ಎಂದು ಕರೆಯುತ್ತಿದ್ದೀರಿ ಮತ್ತು ನಾನು ದಡ್ಡನಿರಬಹುದು ಎಂದರು.
Advertisement