ಹುತಾತ್ಮ ಅಗ್ನಿವೀರ್ ಪರಿಹಾರ ವಿಚಾರವಾಗಿ ಸಂಸತ್ತಿನಲ್ಲಿ ರಾಜನಾಥ್ ಸುಳ್ಳು ಹೇಳಿಕೆ: ರಾಹುಲ್ ಆರೋಪ ನಿರಾಕರಿಸಿದ ಸೇನೆ
ನವದೆಹಲಿ: ಹುತಾತ್ಮರಾದ ಅಗ್ನಿವೀರ ಯೋಧರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ "ಸುಳ್ಳು" ಹೇಳಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು ಇದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು. ಈ ಆರೋಪವನ್ನು ಭಾರತೀಯ ಸೇನೆ ನಿರಾಕರಿಸಿದೆ.
ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್‌ಗಳು ವೈರಲ್ ಆಗಿತ್ತು. ಅಗ್ನಿವೀರ್ ಅಜಯ್ ಕುಮಾರ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಭಾರತೀಯ ಸೇನೆಯು ನಮನ ಸಲ್ಲಿಸುತ್ತದೆ ಎಂದು ಹೇಳಿದ ಎಡಿಜಿ ಪಿಐ, ಪೂರ್ಣ ಸೇನಾ ಗೌರವಗಳೊಂದಿಗೆ ಅವರಿಗೆ ಕೊನೆಯ ವಿದಾಯ ನೀಡಲಾಯಿತು. ಅಲ್ಲದೆ ಅಗ್ನಿವೀರ್ ಅಜಯ್ ಕುಟುಂಬ ಸದಸ್ಯರಿಗೆ ಈಗಾಗಲೇ 98.39 ಲಕ್ಷ ರೂಪಾಯಿ ನೀಡಲಾಗಿದೆ. ಅಲ್ಲದೆ, ಅಗ್ನಿವೀರ್ ಯೋಜನೆಯ ನಿಬಂಧನೆಗಳ ಪ್ರಕಾರ ಸುಮಾರು 67 ಲಕ್ಷ ರೂ.ಗಳ ಆರ್ಥಿಕ ನೆರವು ಹಾಗೂ ಇತರೆ ಸವಲತ್ತುಗಳನ್ನು ಪೊಲೀಸ್ ಪರಿಶೀಲನೆಯ ನಂತರ ಪಾವತಿಸಲಾಗುವುದು ಎಂದು ಎಡಿಜಿ ಪಿ.ಐ. ಹೇಳಿದ್ದು ಒಟ್ಟು ಮೊತ್ತ ಸುಮಾರು 1.65 ಕೋಟಿ ರೂ. ಆರ್ಥಿಕ ನೆರವು ಹುತಾತ್ಮರ ಕುಟುಂಬಕ್ಕೆ ಸೇರುತ್ತದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮ ಅಗ್ನಿವೀರ್ ಅವರ ಕುಟುಂಬಕ್ಕೆ ನೆರವು ಪಡೆಯುವ ಬಗ್ಗೆ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಹುತಾತ್ಮ ಯೋಧ ಅಗ್ನಿವೀರ್ ಅಜಯ್ ಸಿಂಗ್ ಅವರ ಸುಳ್ಳುಗಳ ಬಗ್ಗೆ ಅವರ ತಂದೆಯೇ ಸತ್ಯವನ್ನು ಹೇಳಿದ್ದಾರೆ. ರಕ್ಷಣಾ ಸಚಿವರು ಸಂಸತ್ತು, ದೇಶ, ಸೇನೆ ಮತ್ತು ಹುತಾತ್ಮ ಅಗ್ನಿವೀರ್ ಅಜಯ್ ಸಿಂಗ್ ಅವರ ಕುಟುಂಬದ ಕ್ಷಮೆ ಯಾಚಿಸಬೇಕು. ತಮ್ಮ ವಿಡಿಯೋದಲ್ಲಿ ರಾಹುಲ್ ಗಾಂಧಿ ಅಗ್ನಿವೀರ್ ಹುತಾತ್ಮ ಯೋಧ ಅಜಯ್ ಸಿಂಗ್ ತಂದೆಯ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ರಾಹುಲ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, 'ದೇಶಕ್ಕಾಗಿ ತಮ್ಮ ಮಕ್ಕಳನ್ನು ತ್ಯಾಗ ಮಾಡಿದ ಕುಟುಂಬಗಳ ತ್ಯಾಗವನ್ನು ಬಿಜೆಪಿ ಅವಮಾನಿಸಿದೆ' ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನಾನು ಅಗ್ನಿವೀರ್ ಕುಟುಂಬವನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದರು. ಅಗ್ನಿವೀರನಿಗೆ ಕೇಂದ್ರ ಸರ್ಕಾರ ಹುತಾತ್ಮ ಸ್ಥಾನಮಾನ ನೀಡುವುದಿಲ್ಲ. ಅಗ್ನಿವೀರ್ ಬಳಕೆ ಮತ್ತು ಎಸೆಯುವ ಕಾರ್ಮಿಕ. ಈ ಯೋಜನೆ ಬಗ್ಗೆ ಸೈನಿಕರ ಮನಸ್ಸಿನಲ್ಲಿ ಭಯವಿದೆ. ಮೋದಿಜಿ ಈ ಸೈನಿಕರನ್ನು ಹುತಾತ್ಮರೆಂದು ಪರಿಗಣಿಸುವುದಿಲ್ಲ ಎಂದು ಆರೋಪಿಸಿದ್ದರು. ಈ ಕುರಿತು ರಾಜನಾಥ್ ಸಿಂಗ್ ಅವರು ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ಕುರಿತಂತೆ ರಾಹುಲ್ ಗಾಂಧಿ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೆ 158 ಸಂಸ್ಥೆಗಳಿಂದ ಸಲಹೆಗಳನ್ನು ಪಡೆದ ನಂತರ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲೆ ರಾಹುಲ್ ಗಾಂಧಿ ಭಾಷಣದ ವೇಳೆ ರಾಜನಾಥ್ ಸಿಂಗ್ ಮಧ್ಯಪ್ರವೇಶಿಸಿ, ಕರ್ತವ್ಯದ ಸಾಲಿನಲ್ಲಿ ಪ್ರಾಣ ತ್ಯಾಗ ಮಾಡಿದ ಅಗ್ನಿವೀರ್‌ಗೆ 1 ಕೋಟಿ ರೂಪಾಯಿ ಪರಿಹಾರ ಸಿಗುತ್ತದೆ ಎಂದು ಹೇಳಿದ್ದರು. ಸಂಸತ್ತಿನ ದಿಕ್ಕು ತಪ್ಪಿಸದಂತೆ ರಾಹುಲ್ ಗಾಂಧಿಗೆ ರಾಜನಾಥ್ ಸಿಂಗ್ ಕೇಳಿಕೊಂಡಿದ್ದರು. ಅಗ್ನಿಪಥ ಯೋಜನೆಯಲ್ಲಿ ರಾಹುಲ್ ಅವರ ಹೇಳಿಕೆಯನ್ನು ತೆಗೆದುಹಾಕುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ