
ನವದೆಹಲಿ: ಬ್ರಿಟನ್ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಉಭಯ ರಾಷ್ಟ್ರಗಳ ನಾಯಕರು ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದವನ್ನು ಆದಷ್ಟು ಬೇಗ ಮುಗಿಸುವ ಕಾರ್ಯದತ್ತ ಪರಸ್ಪರ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ಅವರ ಲೇಬರ್ ಪಾರ್ಟಿಯ ಜಯಭೇರಿ ಮತ್ತು ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅವರನ್ನು ಮೋದಿ ಅಭಿನಂದಿಸಿದ್ದು, ಉಭಯ ನಾಯಕರು ಭಾರತ ಮತ್ತು ಯುಕೆ ನಡುವಿನ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಂಡಿದ್ದಾರೆ. ಎರಡೂ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಯುಕೆಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದ ಸಕಾರಾತ್ಮಕ ಕೊಡುಗೆಗಳನ್ನು ಶ್ಲಾಘಿಸಿದ ಸ್ಟಾರ್ಮರ್, ಜನರ ನಡುವಿನ ನಿಕಟ ಸಂಬಂಧ ಉತ್ತೇಜನವನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ. ಉಭಯ ನಾಯಕರು ಸಂಪರ್ಕದಲ್ಲಿರಲು ಸಮ್ಮತಿಸಿದ್ದರಿಂದ ಭಾರತಕ್ಕೆ ಆರಂಭಿಕ ಭೇಟಿಗಾಗಿ ಸ್ಟಾರ್ಮರ್‌ಗೆ ಮೋದಿ ಆಹ್ವಾನವನ್ನೂ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಸ್ಟಾರ್ಮರ್ ಅವರೊಂದಿಗೆ ಮಾತನಾಡಿದ್ದು ಸಂತೋಷವಾಗಿದೆ. ಯುಕೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಅವರನ್ನು ಅಭಿನಂದಿಸಿದ್ದೇನೆ. ನಮ್ಮ ಜನರ ಪ್ರಗತಿ ಸಮೃದ್ಧಿ ಮತ್ತು ಜಾಗತಿಕ ಒಳಿತಿಗಾಗಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತು ದೃಢವಾದ ಭಾರತ-ಯುಕೆ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.
Advertisement