
ನವದೆಹಲಿ: NEET UG 2024 ಕೌನ್ಸೆಲಿಂಗ್: ರಾಷ್ಟ್ರೀಯ ಅರ್ಹತೆ ಮತ್ತು ಪದವಿ ಪ್ರವೇಶ ಪರೀಕ್ಷೆ (NEET UG) 2024 ರ ಕೌನ್ಸೆಲಿಂಗ್ ನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ. NEET UG ಅಖಿಲ ಭಾರತ ಕೋಟಾ (AIQ) ಸೀಟ್ ಕೌನ್ಸೆಲಿಂಗ್ ಇಂದು ಆರಂಭವಾಗಬೇಕಿತ್ತು. NEET UG ಕೌನ್ಸೆಲಿಂಗ್ ನ್ನು ವಿಳಂಬಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಬರುವ ಸೋಮವಾರ ವಿವಿಧ NEET UG 2024 ಅರ್ಜಿಗಳನ್ನು ಆಲಿಸಲಿದ್ದಾರೆ.
ಅರ್ಜಿದಾರರು ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಆರೋಪ ಮಾಡಿದ್ದರು. ಕೆಲವರು ಪೂರ್ಣ ಪರೀಕ್ಷೆಯನ್ನು ರದ್ದುಪಡಿಸಲು ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮರುಸಂಘಟಿಸಲು ಒತ್ತಾಯಿಸಿದ್ದಾರೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಕಾರ್ಯವಿಧಾನಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
NEET ಯುಜಿ ಕೌನ್ಸೆಲಿಂಗ್ ನ್ನು ಅನೇಕ ಸುತ್ತುಗಳಲ್ಲಿ ನಡೆಸಲಾಗುತ್ತದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಮೊದಲು ನೋಂದಾಯಿಸಿಕೊಳ್ಳಬೇಕು. NEET ಯುಜಿ ಕೌನ್ಸೆಲಿಂಗ್ ಶುಲ್ಕವನ್ನು ಪಾವತಿಸಬೇಕು, ಆಯ್ಕೆಗಳನ್ನು ಭರ್ತಿ ಮಾಡಿ ಸೀಟ್ ಲಾಕ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನಿಗದಿಪಡಿಸಿದ ಸಂಸ್ಥೆಗೆ ವೈಯಕ್ತಿಕವಾಗಿ ವರದಿ ಮಾಡಬೇಕು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಜೂನ್ 23 ರಂದು ನಡೆಸಿದ 813 (1563 ರಲ್ಲಿ) ಅಭ್ಯರ್ಥಿಗಳ ಮರುಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಪರಿಷ್ಕೃತ ಫಲಿತಾಂಶಗಳೊಂದಿಗೆ, ಟಾಪರ್ ಸಂಖ್ಯೆ 67 ರಿಂದ 61 ಕ್ಕೆ ಇಳಿದಿದೆ.
Advertisement