
ನವದೆಹಲಿ: ಜುಲೈ 2ರ ಹತ್ರಾಸ್ ಸತ್ಸಂಗದ ಸಂದರ್ಭದಲ್ಲಿ ಜನದಟ್ಟಣೆಯಲ್ಲಿ ವಿಷಕಾರಿ ವಸ್ತುವನ್ನು ಹೊಂದಿರುವ ಕ್ಯಾನ್‌ಗಳನ್ನು ಕೆಲವರು ತೆರೆದು ನೂಕುನುಗ್ಗಲು ಉಂಟುಮಾಡಿದರು ಎಂದು ಸಾಕ್ಷಿಗಳು ಹೇಳಿದ್ದಾರೆ ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಅವರ ಪರ ವಕೀಲ ಎಪಿ ಸಿಂಗ್ ಭಾನುವಾರ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಲ್ತುಳಿತದ ಹಿಂದೆ ಭೋಲೆ ಬಾಬಾ ಅವರ ಹೆಚ್ಚುತ್ತಿರುವ ಜನಪ್ರಿಯತೆ ಕಾರಣದಿಂದ ಕೆಲವರು ಪಿತೂರಿ ನಡೆಸಿದರು ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾನ 'ಸತ್ಸಂಗ'ದ ನಂತರ ನಡೆದ ಕಾಲ್ತುಳಿತದಲ್ಲಿ 121 ಜನರು ಜನರು ಮೃತಪಟ್ಟಿದ್ದು ಅವರಲ್ಲಿ ಹೆಚ್ಚಾಗಿ ಮಹಿಳೆಯರು ಸೇರಿದ್ದಾರೆ.
ಕಾಲ್ತುಳಿತವನ್ನು ಕಂಡ ಪ್ರತ್ಯಕ್ಷದರ್ಶಿಗಳು ನನ್ನ ಬಳಿಗೆ ಬಂದು 15-16 ಜನರು ವಿಷಕಾರಿ ಪದಾರ್ಥದ ಡಬ್ಬಿಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ಹೇಳಿದರು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಸಿರುಕಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳುತ್ತದೆ ಎಂದರು.
ಕಾಲ್ತುಳಿತದ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ ಅವರು, ಪುರುಷರು ತಪ್ಪಿಸಿಕೊಳ್ಳಲು ಸಹಾಯ ಮಾಡಲು ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ನಮ್ಮ ಬಳಿ ಪುರಾವೆಗಳಿವೆ, ಅದನ್ನು ಕೋರ್ಟ್ ಗೆ ಸಲ್ಲಿಸುತ್ತೇವೆ ಎಂದರು.
ನನ್ನನ್ನು ಸಂಪರ್ಕಿಸಿದ ಸಾಕ್ಷಿಗಳು ಹೆಸರು ಹೇಳದಂತೆ ಸೂಚಿಸಿದ್ದಾರೆ, ಅವರಿಗೆ ನಾವು ಭದ್ರತೆ ನೀಡುತ್ತೇವೆ ಎಂದರು.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಸೇರಿದಂತೆ ಒಂಬತ್ತು ಜನರನ್ನು ಇದುವರೆಗೆ ಬಂಧಿಸಲಾಗಿದೆ. ಮಧುಕರ್ ಅವರು 'ಸತ್ಸಂಗ'ದ ಪ್ರಮುಖ ಸಂಘಟಕ ಮತ್ತು ನಿಧಿಸಂಗ್ರಹಕಾರರಾಗಿದ್ದರು, ಅಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು, ಸ್ಥಳೀಯ ಆಡಳಿತ ಅನುಮತಿ ನೀಡಿದ್ದು 80 ಸಾವಿರ ಜನರನ್ನು ಸೇರಿಸಲು ಎಂದು ಹೇಳಲಾಗುತ್ತಿದೆ.
ಸ್ಥಳೀಯ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾನನ್ನು ಆರೋಪಿ ಎಂದು ಉಲ್ಲೇಖಿಸಲಾಗಿಲ್ಲ.
Advertisement