BMW ಹಿಟ್ ಅಂಡ್ ರನ್ ಪ್ರಕರಣ: 3 ದಿನಗಳ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮಿಹಿರ್ ಶಾ ಬಂಧನ
ಮುಂಬೈ: ಜುಲೈ 7ರಂದು ನಗರದ ವರ್ಲಿ ಪ್ರದೇಶದಲ್ಲಿ ಸಂಭವಿಸಿದ ಹಿಟ್ ಅಂಡ್ ರನ್ ಅಪಘಾತದ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆಡಳಿತಾರೂಢ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ 24 ವರ್ಷದ ಮಿಹಿರ್ ಅಪಘಾತದ ದಿನದಿಂದ ತಲೆಮರೆಸಿಕೊಂಡಿದ್ದನು. ಇನ್ನು ಆತನ ಶೋಧಕ್ಕಾಗಿ ಮುಂಬೈ ಪೊಲೀಸರು 11 ತಂಡಗಳನ್ನು ರಚಿಸಿದ್ದರು. ಮಿಹಿರ್ ವಿರುದ್ಧ ಲುಕ್ ಔಟ್ ನೋಟಿಸ್ ಸಹ ಜಾರಿಯಾಗಿತ್ತು.
ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದಾಗ ಮಿಹಿರ್ ಮದ್ಯಪಾನ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ. ಇನ್ನು ಬಿಎಂಡಬ್ಲ್ಯೂ ಕಾರು ಡಿಕ್ಕಿಯಿಂದ 45 ವರ್ಷದ ಕಾವೇರಿ ನಖ್ವಾ ಸಾವನ್ನಪ್ಪಿದ್ದು ಅವರ ಪತಿ ಪ್ರದೀಪ್ ನಖ್ವಾ ಗಾಯಗೊಂಡರು.
ದಂಪತಿ ಭಾನುವಾರ ಬೆಳಗ್ಗೆ ಕ್ರಾಫರ್ಡ್ ಮಾರುಕಟ್ಟೆಯಿಂದ ಮೀನು ಖರೀದಿಸಿ ಹಿಂದಿರುಗುತ್ತಿದ್ದಾಗ ಮುಂಜಾನೆ 5:30ರ ಸುಮಾರಿಗೆ ವೇಗವಾಗಿ ಬಂದ ಕಾರು ಅವರ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಅಲ್ಲದೆ ಅಪಘಾತದಲ್ಲಿ ಕಾರು ಮಹಿಳೆಯನ್ನು 1.5 ಕಿಲೋಮೀಟರ್ ದೂರ ಎಳೆದೊಯ್ದಿದ್ದು, ಆಕೆಯ ಪತಿ ವಾಹನದಿಂದ ಜಿಗಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದರು.
ಅಪಘಾತದ ನಂತರ ಮಿಹಿರ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಿಹಿರ್ ತಂದೆ ಶಿವಸೇನಾ ನಾಯಕ ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು ಮುಂಬೈ ಕೋರ್ಟ್ ರಾಜೇಶ್ ಶಾನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೆ ರಾಜೇಂದ್ರ ಸಿಂಗ್ ಬಿಡಾವತ್ ಗೆ 1 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಜುಹುವಿನ ಬಾರ್‌ವೊಂದರಲ್ಲಿ ಗೆಳೆಯರ ಜತೆ ಮದ್ಯಪಾನ ಮಾಡಿದ್ದ ಮಿಹಿರ್ ತಾನೇ ಚಾಲನೆ ಮಾಡುತ್ತೇನೆ ಎಂದು ಚಾಲಕನಿಗೆ ಹೇಳಿ ಕಾರು ಚಲಾಯಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ