
ನವದೆಹಲಿ: ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ವಿರುದ್ಧದ ಆರೋಪಗಳ ತನಿಖೆಗೆ ಕೇಂದ್ರ ಸರ್ಕಾರ ಗುರುವಾರ ಏಕಸದಸ್ಯ ಸಮಿತಿ ರಚಿಸಿದೆ ಎಂದು ಮೂಲಗಳು ತಿಳಿಸಿವೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಹೆಚ್ಚುವರಿ ಕಾರ್ಯದರ್ಶಿ ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪೂಜಾ ಖೇಡ್ಕರ್ ಅವರು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗದ(ಒಬಿಸಿ) ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಅಧಿಕಾರ ದುರುಪಯೋಗ ಆರೋಪದ ಮೇಲೆ ಪೂಜಾ ಖೇಡ್ಕರ್ ಅವರನ್ನು ಸೋಮವಾರ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದ್ದು, ಇಂದು ವಿದರ್ಭ ಪ್ರದೇಶದ ವಾಶಿಮ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Advertisement