
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿ ಜೂನ್ ಗೆ ಮುಕ್ತಾಯವಾಗಿದೆ. ಇನ್ನು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ಜಡ್ಡಾಗೆ ಆರೋಗ್ಯ, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಮಹತ್ವದ ಖಾತೆಯನ್ನು ನೀಡಲಾಗಿದೆ. ಹೀಗಾಗಿ ಬಿಜೆಪಿಗೆ ಈಗ ಅಧ್ಯಕ್ಷರ ಹುಡುಕಾಟ ನಡೆದಿದೆ.
ಈ ವರ್ಷದ ಡಿಸೆಂಬರ್ ವೇಳೆಗೆ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಹೀಗಾಗಿ ಅಲ್ಲಿಯವರೆಗೂ ಜೆಪಿ ನಡ್ಡಾ ಅವರೇ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಸ್ಥಾನಕ್ಕೆ ಆಗಸ್ಟ್ 1ರಂದು ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ ಜಿಲ್ಲಾ ಮತ್ತು ರಾಜ್ಯ ಘಟಕಗಳನ್ನು ಬಲಪಡಿಸುವ ಜತೆಗೆ ಸಮಗ್ರ ಸದಸ್ಯತ್ವ ಅಭಿಯಾನ ನಡೆಸಲಾಗುವುದು.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆಗಸ್ಟ್ 1ರಂದು ಆರಂಭವಾಗಲಿದ್ದು, ಆರಂಭದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 30ರವರೆಗೆ ಸಕ್ರಿಯ ಸದಸ್ಯತ್ವ ಅಭಿಯಾನ ನಡೆಯಲಿದೆ. ಅಕ್ಟೋಬರ್‌ನಿಂದ 1 ರಿಂದ ಅಕ್ಟೋಬರ್ 15 ರವರೆಗೆ ಸಕ್ರಿಯ ಸದಸ್ಯತ್ವದ ಪರಿಶೀಲನೆ ನಡೆಸಲಾಗುವುದು.
ಬಿಜೆಪಿ ಪ್ರಕಾರ, ಪ್ರತಿಯೊಬ್ಬ ಸದಸ್ಯರು ಒಂಬತ್ತು ವರ್ಷಗಳಿಗೊಮ್ಮೆ ತಮ್ಮ ಸದಸ್ಯತ್ವವನ್ನು ನವೀಕರಿಸಬೇಕಾಗುತ್ತದೆ. ಈ ವರ್ಷ, ಸದಸ್ಯತ್ವ ಅಭಿಯಾನವು ಪ್ರಧಾನಿ, ಪಕ್ಷದ ಅಧ್ಯಕ್ಷರು ಮತ್ತು ಎಲ್ಲಾ ಪಕ್ಷದ ನಾಯಕರು ತಮ್ಮ ಸದಸ್ಯತ್ವವನ್ನು ನವೀಕರಿಸುವ ಅಗತ್ಯವಿದೆ. ನವೆಂಬರ್ 1 ರಿಂದ ನವೆಂಬರ್ 15 ರವರೆಗೆ ಬಿಜೆಪಿ ಮಂಡಲ (ಸ್ಥಳೀಯ ಘಟಕ) ಅಧ್ಯಕ್ಷರ ಚುನಾವಣೆಯನ್ನು ನಡೆಸಲಿದೆ. ಇದಾದ ನಂತರ ನವೆಂಬರ್ 16 ರಿಂದ ನವೆಂಬರ್ 30 ರವರೆಗೆ ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಲಿದೆ.
ಮಂಡಲ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆಯ ನಂತರ ರಾಜ್ಯ ಪರಿಷತ್ತು ಮತ್ತು ಕೇಂದ್ರ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಈ ಚುನಾವಣೆಯ ನಂತರವೇ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಡಿ.1ರಂದು ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಶೇ.50ರಷ್ಟು ರಾಜ್ಯಗಳಲ್ಲಿ ಚುನಾವಣೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಅಧಿಕೃತ ಪ್ರಕ್ರಿಯೆ ಆರಂಭವಾಗಲಿದೆ.
Advertisement