
ಕೊಲ್ಕತ್ತ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಗತ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಇದು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಘೋಷಣೆಯಾಗಿತ್ತು.
ಅಲ್ಪಸಂಖ್ಯಾತ ಸಮುದಾಯದ ಬೆಂಬಲದ ಕೊರತೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ್ದರ ಬಗ್ಗೆ ಮಾತನಾಡಿದ ಸುವೇಂದು ಅಧಿಕಾರಿ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎನ್ನುವುದು ಅನಗತ್ಯ. ನಮ್ಮೊಂದಿಗೆ ಯಾರು ಇರುತ್ತಾರೋ ಅವರೊಂದಿಗೆ ನಾವು ಇರುತ್ತೇವೆ ಎಂದರು.
ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಅಧಿವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಅಗತ್ಯವನ್ನು ತಳ್ಳಿಹಾಕಿದರು. ನಾನು ರಾಷ್ಟ್ರೀಯವಾದಿ ಮುಸ್ಲಿಮರ ಪರವಾಗಿ ಮಾತನಾಡುತ್ತಿದ್ದೇನೆ. ನಾವೆಲ್ಲರೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತೇವೆ. ಆದರೆ, ಇನ್ನೂ ಮುಂದೆ ನಾನು ಅದನ್ನು ಹೇಳುವುದಿಲ್ಲ. ನಮ್ಮೊಂದಿಗೆ ಇರುವರೊಂದಿಗೆ ನಾವು ಇರುತ್ತೇವೆ. ಅಲ್ಪಸಂಖ್ಯಾತ ಮೋರ್ಚಾದ ಅಗತ್ಯವೂ ಇಲ್ಲ ಎಂದು ಹೇಳಿದರು. ನಂತರ ತಾನು ಯಾವ ಅರ್ಥದಲ್ಲಿ ಹೇಳಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮತದಾರರಲ್ಲಿ ಶೇ.30 ರಷ್ಟು ಜನ ಅಲ್ಪಸಂಖ್ಯಾತರಿದ್ದಾರೆ. ಲೋಕಸಭಾ ಚುನಾವಣೆ ವೇಳೆಯಲ್ಲಿ ಹಲವು ಪ್ರದೇಶದಲ್ಲಿ ಟಿಎಂಸಿಯ ಜಿಹಾದಿ ಗೂಂಡಾಗಳು ಹಿಂದೂಗಳಿಗೆ ಮತದಾನ ಮಾಡಲು ಅವಕಾಶ ನೀಡಲಿಲ್ಲ ಎಂದು ಸುವೇಂದು ದೂರಿದ್ದಾರೆ. ಆದರೆ ಉತ್ತರ ಬಂಗಾಳದಲ್ಲಿ ಎಡ-ಕಾಂಗ್ರೆಸ್ ಮೈತ್ರಿಕೂಟ ಮತ್ತು ಟಿಎಂಸಿ ನಡುವಿನ ಸಮುದಾಯದ ಮತಗಳ ವಿಭಜನೆ ಬಿಜೆಪಿಗೆ ಅನುಕೂಲವಾಗಿದೆ ಎನ್ನಲಾಗಿದೆ.
ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿರುವ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿಯಂತೆ ಜನರನ್ನು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಆಧಾರದ ಮೇಲೆ ವಿಭಜಿಸುವುದರಲ್ಲಿ ನನಗೆ ನಂಬಿಕೆಯಿಲ್ಲ .ನಾವು ಜನರನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಂಗಡಿಸಬಾರದು ಮತ್ತು ಅವರನ್ನು ಭಾರತೀಯರು ಎಂದು ನೋಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಕರೆಯನ್ನು ನನ್ನ ಆತ್ಮದಲ್ಲಿ ಸಾಕಾರಗೊಳಿಸುತ್ತೇನೆ ಎಂದು ಹೇಳಿದ್ದಾರೆ.
Advertisement