
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಕೌನ್ಸಿಲರ್‌ನ ವೀಡಿಯೊ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತಮ್ಮ ಪಕ್ಷದ ಯುವ ನಾಯಕನನ್ನು ಥಳಿಸುವ ದೃಶ್ಯವಿದೆ. ಈ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದಂತೆಯೇ ವಿವಾದ ಸೃಷ್ಟಿಯಾಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಜನರು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ವಿಡಿಯೋದಲ್ಲಿ ವಾರ್ಡ್ ನಂ.18ರ ಮಹಿಳಾ ಕೌನ್ಸಿಲರ್ ಸುನಂದಾ ಸರ್ಕಾರ್ ಅವರು ವಾರ್ಡ್ ನ ಟಿಎಂಸಿ ಯುವ ಅಧ್ಯಕ್ಷ ಕೇದಾರ್ ದಾಸ್ ಅವರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ಸುನಂದಾ ಸರ್ಕಾರ್ ಅವರು ಕೇದಾರ್ ದಾಸ್ ಅವರನ್ನು ಥಳಿಸಿದ್ದಾರೆ. ಏಕೆಂದರೆ ಆತ ಹಲವು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿಯುತ್ತಿದ್ದಂತೆ ಕೋಪಗೊಂಡ ಸುನಂದಾ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಿದ್ದಾರೆ. ಇದು ದುರದೃಷ್ಟಕರ ಸಂಗತಿ. ಹಿರಿಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು. ಇಂತಹ ಘಟನೆ ನಡೆಯುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷವು ಆಂತರಿಕ ಭಿನ್ನಾಭಿಪ್ರಾಯದ ಪರಿಣಾಮ ಎಂದು ವಿವರಿಸಿದೆ. ಈ ಘಟನೆಯು ಬಂಗಾಳದ ರಾಜಕೀಯ ಪ್ರಕ್ಷುಬ್ಧತೆ ಮತ್ತು ಅದರ ಆಂತರಿಕ ಕಲಹವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಲಾಗಿದೆ. ಪಕ್ಷದ ಶ್ರೇಣಿಯೊಳಗೆ ಸುಲಿಗೆಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಪಕ್ಷವು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಸುನಂದಾ ಅವರ ಈ ಕ್ರಮ ಭ್ರಷ್ಟಾಚಾರ ಆರೋಪಗಳಿಂದ ಈಗಾಗಲೇ ಕಳಂಕಿತವಾಗಿರುವ ಟಿಎಂಸಿಯ ವಿಶ್ವಾಸಾರ್ಹತೆಗೆ ಮತ್ತಷ್ಟು ಮಸಿ ಬಳಿದಿವೆ. ಇದು ತೃಣಮೂಲದಲ್ಲಿ ಬಿಕ್ಕಟ್ಟು ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಏತನ್ಮಧ್ಯೆ, ಸಿಪಿಐ (ಎಂ) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಘಟನೆಯನ್ನು ಖಂಡಿಸಿದ್ದಾರೆ. ಈ ಪ್ರಕರಣವನ್ನು ಬೀದಿ ನ್ಯಾಯದ ಕ್ರಮ ಎಂದು ಬಣ್ಣಿಸಿದ್ದಾರೆ.
Advertisement