
ಲಖನೌ: ಉತ್ತರ ಪ್ರದೇಶದ ಗೊಂಡಾ ಬಳಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು(15904) ಗುರುವಾರ ಹಳಿತಪ್ಪಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು 34 ಮಂದಿ ಗಾಯಗೊಂಡಿದ್ದಾರೆ.
ಲಖನೌದಿಂದ ಸುಮಾರು 150 ಕಿಮೀ ದೂರದಲ್ಲಿರುವ ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಐದು ಎಸಿ, ಒಂದು ಪ್ಯಾಂಟ್ರಿ ಮತ್ತು ಒಂದು ಜನರಲ್ ಬೋಗಿ ಸೇರಿದಂತೆ ಎಂಟು ಬೋಗಿಗಳು ಹಳಿಯಿಂದ ಹೊರಬಂದಿದ್ದು, ಉಳಿದ ಬೋಗಿಗಳು ಹಳಿಗಳ ಮೇಲೆ ಉಳಿದಿವೆ.
ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪುವ ಮೊದಲು ಸ್ಫೋಟದ ಶಬ್ದ ಕೇಳಿ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.
ಇಬ್ಬರು ಗಾಯಾಳುಗಳಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಗೊಂಡಾ ಜಿಲ್ಲಾಸ್ಪತ್ರೆಯಿಂದ ಲಖನೌಗೆ ಕರೆತರುವಾಗ ಮೃತಪಟ್ಟಿದ್ದಾರೆ.
ಮೃತರನ್ನು ಅರಾರಿಯಾ(ಬಿಹಾರ) ಮೂಲದ ಸರೋಜ್ ಕುಮಾರ್ ಸಿಂಗ್(30) ಮತ್ತು ಚಂಡೀಗಢದ ರಾಹುಲ್(38) ಎಂದು ಗುರುತಿಸಲಾಗಿದೆ.
ಆರಂಭದಲ್ಲಿ, ಅಪಘಾತದ ಸ್ಥಳಕ್ಕೆ ಧಾವಿಸಿದ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು, ರೈಲು ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಅವರಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
Advertisement