
ಡೆಹ್ರಾಡೂನ್: ಉದ್ಧವ್ ಠಾಕ್ರೆಗೆ ನಂಬಿಕೆ ದ್ರೋಹವಾಗಿದೆ ಎಂಬ ಜ್ಯೋತಿಷ್ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿಕೆಗೆ ಬಿಜೆಪಿ ಸಂಸದೆ ಕಂಗನಾ ರನೌತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಪಕ್ಷದ ಮಿತ್ರ ಪಕ್ಷ ಶಿವಸೇನೆ (ಶಿಂಧೆ ಬಣ) ನಾಯಕ ಏಕನಾಥ್ ಶಿಂಧೆಯನ್ನು ಸಮರ್ಥಿಸಿಕೊಂಡಿರುವ ಕಂಗನಾ, "ರಾಜಕಾರಣಿಯು ರಾಜಕೀಯದಲ್ಲಿ ರಾಜಕೀಯ ಮಾಡದೇ, ಗೋಲ್ಗಪ್ಪ ಮಾರುತ್ತಾರಾ?" ಎಂದು ಪ್ರಶ್ನಿಸಿದ್ದಾರೆ.
"ರಾಜಕೀಯದಲ್ಲಿ, ಮೈತ್ರಿಗಳು, ಒಪ್ಪಂದಗಳು ಮತ್ತು ಪಕ್ಷದ ವಿಭಜನೆ ಹೊಂದುವುದು ತುಂಬಾ ಸಾಮಾನ್ಯ ಮತ್ತು ಸಾಂವಿಧಾನಿಕವಾಗಿದೆ. ಕಾಂಗ್ರೆಸ್ ಪಕ್ಷ 1907 ರಲ್ಲಿ ವಿಭಜನೆಯಾಯಿತು ಮತ್ತು ನಂತರ 1971 ರಲ್ಲಿ ಮತ್ತೆ ವಿಭಜನೆಯಾಯಿತು" ಎಂದು ನಟ-ರಾಜಕಾರಣಿ X ನಲ್ಲಿ ಬರೆದಿದ್ದಾರೆ.
"ಶಂಕರಾಚಾರ್ಯರು ತಮ್ಮ ಪದಗಳನ್ನು ಮತ್ತು ಅವರ ಪ್ರಭಾವ ಮತ್ತು ಧಾರ್ಮಿಕ ಶಿಕ್ಷಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ರಾಜನು ತನ್ನ ಪ್ರಜೆಗಳನ್ನು ಶೋಷಿಸಲು ಪ್ರಾರಂಭಿಸಿದರೆ ವಿಶ್ವಾಸಘಾತವೂ ಧರ್ಮ ಮಾರ್ಗವೇ ಎಂದು ಧರ್ಮ ಹೇಳುತ್ತದೆ" ಎಂದು ರನೌತ್ ಹಿಂದಿಯಲ್ಲಿ ಬರೆದಿದ್ದಾರೆ.
ಏಕನಾಥ್ ಶಿಂಧೆ ಅವರನ್ನು ದ್ರೋಹಿ, ವಿಶ್ವಾಸಘಾತುಕ ಎಂದು ಹೇಳುವ ಮೂಲಕ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ನಮ್ಮೆಲ್ಲರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಇಂತಹ ಕ್ಷುಲ್ಲಕ ಮಾತುಗಳನ್ನಾಡುವ ಮೂಲಕ ಶಂಕರಾಚಾರ್ಯರು ಹಿಂದೂ ಧರ್ಮದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಏಕನಾಥ್ ಶಿಂಧೆ ಬಣದ ಶಾಸಕರು ಉದ್ಧವ್ ಠಾಕ್ರೆ ಪಕ್ಷದಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದನ್ನು ನಂಬಿಕೆ ದ್ರೋಹ ಎಂದಿದ್ದ ಅವಿಮುಕ್ತೇಶ್ವರಾನಂದ ಸರಸ್ವತಿ, ಉದ್ಧವ್ ಠಾಕ್ರೆ ವಿಶ್ವಾಸದ್ರೋಹದ ಬಲಿಪಶುವಾಗಿದ್ದಾರೆ ಎಂದು ಹೇಳಿದ್ದರು.
Advertisement