
ನವದೆಹಲಿ: ಸಂಸತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯ ಬಗ್ಗೆ ಮತ್ತು ಮಾಹಿತಿ ಹಕ್ಕಿನ ವಿಷಯಗಳನ್ನು ಪ್ರಸ್ತಾಪಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತೀಯ ಸಂಪಾದಕರ ಸಂಘ ಶನಿವಾರ ಮನವಿ ಮಾಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ಕೆಲವು ವರ್ಷಗಳಿಂದ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಶಾಸಕಾಂಗ ಕ್ರಮಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಮುದ್ರಣ, ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮದ ಬಗ್ಗೆ ಹೊಸ ಚರ್ಚೆ ಮತ್ತು ಸಮಾಲೋಚನೆಗಳಿಗೆ ಸಂಪಾದಕರ ಸಂಘ ಕರೆ ನೀಡಿದೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್, ಬ್ರಾಡ್‌ಕಾಸ್ಟ್ ಸರ್ವೀಸಸ್ ರೆಗ್ಯುಲೇಶನ್ ಬಿಲ್, ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಪಿರಿಯಾಡಿಕಲ್ಸ್ ಆಕ್ಟ್ ಮತ್ತು ಐಟಿ ರೂಲ್ಸ್ 2021 ಮತ್ತು 2023ಕ್ಕೆ ತಂದ ತಿದ್ದುಪಡಿಗಳ ಬಗ್ಗೆ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.
"ನಮ್ಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮುಕ್ತ ಮತ್ತು ಸ್ವತಂತ್ರ ಮಾಧ್ಯಮದ ಅತ್ಯಗತ್ಯ ಇದೆ ಎಂದು ನಾವು ನಂಬುತ್ತೇವೆ. ಈ ಮೂಲಭೂತ ತತ್ವಗಳನ್ನು ರಕ್ಷಿಸಲು ಈ ಶಾಸಕಾಂಗ ಕ್ರಮಗಳನ್ನು ಮರುಪರಿಶೀಲಿಸುವುದು ಕಡ್ಡಾಯವಾಗಿದೆ" ಎಂದು ಗಿಲ್ಡ್ ಹೇಳಿದೆ.
ಈ ಶಾಸನಾತ್ಮಕ ಕ್ರಮಗಳ ಬಗ್ಗೆ ಸಾಮಾನ್ಯ ಕಾಳಜಿಯೆಂದರೆ, ಈ ಕಾನೂನುಗಳ ಕರಡು ಮತ್ತು ಅಂಗೀಕಾರದಲ್ಲಿ ಸಾಕಷ್ಟು ಸಮಾಲೋಚನೆ ಮತ್ತು ಸಂಸದೀಯ ಪರಿಶೀಲನೆಯಿಲ್ಲದೆ ಅವುಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಪಾದಕರ ಸಂಘ ಆರೋಪಿಸಿದೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2024ರಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ 159 ನೇ ಸ್ಥಾನದಲ್ಲಿದೆ.
Advertisement