
ಚೆನ್ನೈ: ತಮ್ಮ ಉಭಯ ಪದವಿಯಲ್ಲಿ ಸರ್ವಾಂಗೀಣ ಪ್ರಾವೀಣ್ಯತೆಗಾಗಿ ರಾಜ್ಯಪಾಲರ ಪ್ರಶಸ್ತಿಯನ್ನು ಪಡೆದ ಐಐಟಿ ಮದ್ರಾಸ್ ವಿದ್ಯಾರ್ಥಿ ಧನಂಜಯ್ ಬಾಲಕೃಷ್ಣನ್ ಅವರು ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯ ನಿನ್ನೆ ರಾಜಧಾನಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ್ದು, ಅದನ್ನು ಸಾಮೂಹಿಕ ನರಮೇಧ ಎಂದು ಕರೆದಿದ್ದಾರೆ.
ನಿನ್ನೆ ಘಟಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಕೃಷ್ಣನ್, ಪ್ಯಾಲೆಸ್ತೀನಿಯರ ಪರವಾಗಿ ನಾನು ಇಂದು ಮಾತನಾಡದಿದ್ದರೆ ನನಗೆ ನಾನು ಮತ್ತು ನಾನು ನಂಬಿರುವ ವಿಷಯಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. "ಇದು ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಸಾಮೂಹಿಕ ನರಮೇಧದ ವಿರುದ್ಧ ನಾವೆಲ್ಲರೂ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಬೇಕಿದೆ. ಅಲ್ಲಿ ಜನರು ಸಾಯುತ್ತಿದ್ದಾರೆ, ಆ ದೃಶ್ಯವನ್ನು ಕಣ್ಣಿನಲ್ಲಿ ನೋಡಲಾಗುತ್ತಿಲ್ಲ ಎಂದಿದ್ದಾರೆ.
ಇಲ್ಲಿರುವವರು ಇಂದು ಅಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಯಾಕೆ ಮಾತನಾಡಬೇಕು ಎಂದು ಎಲ್ಲರೂ ಇಂದು ಇಲ್ಲಿ ಭಾವಿಸಬಹುದು. ಏಕೆಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(STEM) ನ್ನು ಇಂದು ಇಸ್ರೇಲ್‌ನಂತಹ ಸಾಮ್ರಾಜ್ಯಶಾಹಿ ಶಕ್ತಿಗಳ ರಹಸ್ಯ ಉದ್ದೇಶಗಳನ್ನು ಮುನ್ನಡೆಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದ ಉನ್ನತ ಕಂಪೆನಿಗಳಲ್ಲಿ ಉನ್ನತ ಹುದ್ದೆಯ ಲಾಭದಾಯಕ ಉದ್ಯೋಗಗಳನ್ನು ಪಡೆಯಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶ್ರಮಿಸುತ್ತಿರುವಾಗ, ಈ ತಂತ್ರಜ್ಞಾನದ ದೈತ್ಯ ಕಂಪೆನಿಗಳು ಇಸ್ರೇಲ್‌ಗೆ ತಂತ್ರಜ್ಞಾನವನ್ನು ಒದಗಿಸುವ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಯುದ್ಧಕ್ಕೆ ಬೆಂಬಲ ನೀಡುತ್ತಿವೆ ಎಂದು ಧನಂಜಯ್ ಬಾಲಕೃಷ್ಣ ಆಕ್ರೋಶ ಹೊರಹಾಕಿದ್ದಾರೆ.
ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮುಕ್ತಗೊಳಿಸಲು ಏನು ಮಾಡಬಹುದು ಎಂಬುದರ ಕುರಿತು ಇಂದು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ನನ್ನ ಬಳಿ ಇದಕ್ಕೆಲ್ಲಾ ಉತ್ತರಗಳಿಲ್ಲ. ಆದರೆ ವಾಸ್ತವತೆ ಬಗ್ಗೆ ಅರಿವಿದೆ. ಎಂಜಿನಿಯರಿಂಗ್ ಪದವಿ ಮುಗಿಸಿ ನೈಜ ಜಗತ್ತಿಗೆ ಕಾಲಿಡುವ ಸಂದರ್ಭದಲ್ಲಿ ನಾವು ಮಾಡುವ ಕೆಲಸದ ಪರಿಣಾಮಗಳ ಬಗ್ಗೆ ನಾವು ತಿಳಿದಿರಬೇಕಾಗುತ್ತದೆ ಎಂದರು.
Advertisement