
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಕನ್ವರ್ ಯಾತ್ರೆ ನಿಯಮಗಳಿಗೆ ಮಿತ್ರ ಪಕ್ಷಗಳಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾಗತೊಡಗಿದೆ.
ಈ ವಿಷಯವಾಗಿ ನಿರಂತರವಾಗಿ ಬಿಜೆಪಿಯ ನಿರ್ಧಾರಗಳನ್ನು ವಿರೋಧಿಸುತ್ತಿರುವ ರಾಷ್ಟ್ರೀಯ ಲೋಕ ದಳದ ಮುಖ್ಯಸ್ಥ ಜಯಂತ್ ಚೌಧರಿ, ಉತ್ತರ ಪ್ರದೇಶ ಸರ್ಕಾರವನ್ನು ನಿಯಮ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಕನ್ವರ್ ಯಾತ್ರೆ ಸಾಗುವ ಮಾರ್ಗಗಳಲ್ಲಿ ಅಂಗಡಿ ಮಾಲಿಕರು ತಮ್ಮ ಹೆಸರು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ನಿಯಮ ಜಾರಿಗೊಳಿಸಿದೆ. ಇದನ್ನು ತೀವ್ರವಾಗಿ ಟೀಕಿಸಿರುವ ಜಯಂತ್ ಚೌಧರಿ, ಯಾತ್ರೆಗಳು ಯಾವುದೇ ಧರ್ಮ, ಜಾತಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ಮುಸ್ಲಿಂ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡುವ ಉದ್ದೇಶ ಎಂದು ಆರೋಪಿಸಿದ್ದರೆ, ದೂರಾಲೋಚನೆ ಇಲ್ಲದೇ ನಿರ್ಧಾರ ಕೈಗೊಳ್ಳಲಾಗಿದೆ, ನಿರ್ಧಾರ ತೆಗೆದುಕೊಂಡಾಗಿದೆ ಎಂಬ ಕಾರಣಕ್ಕಾಗಿ ಬಿಜೆಪಿ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಚೌಧರಿ ಆರೋಪಿಸಿದ್ದು, ನಾವು ಹೆಸರಿನ ಟ್ಯಾಗ್ ಗಳನ್ನು ಹಾಕಿಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.
Advertisement