
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವು "ಭಾರೀ ನಿರುದ್ಯೋಗವು ರಾಷ್ಟ್ರೀಯ ಬಿಕ್ಕಟ್ಟು ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ" ತೋರುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಟೀಕಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದು, ತಮ್ಮ ಬಜೆಟ್ ಭಾಷಣದಲ್ಲಿ ಸರ್ಕಾರ ಉದ್ಯೋಗಕ್ಕೆ ಸಂಬಂಧಿಸಿದ ಮೂರು ಯೋಜನೆಗಳನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಹತ್ತು ವರ್ಷಗಳ ನಿರಾಕರಣೆ ನಂತರ ಪ್ರಧಾನಿ ಮೋದಿ ಅಥವಾ ಅವರ ಪಕ್ಷ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಉದ್ಯೋಗಗಳ ಬಗ್ಗೆ ಉಲ್ಲೇಖಿಸದಿದ್ದರೂ ಕೇಂದ್ರ ಸರ್ಕಾರವು ಅಂತಿಮವಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವುದನ್ನು ಒಪ್ಪಿಕೊಂಡಂತೆ ತೋರುತ್ತಿದೆ. ಭಾರೀ ನಿರುದ್ಯೋಗ ರಾಷ್ಟ್ರೀಯ ಬಿಕ್ಕಟ್ಟು ಎಂದು ಒಪ್ಪಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಅಂಶಗಳು ಎಂದು ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನ್ಯಾಯ ಪತ್ರ 2024ರಲ್ಲಿನ ಅಂಶಗಳನ್ನು ಹಣಕಾಸು ಸಚಿವರು ತೆಗೆದುಕೊಂಡಿದ್ದಾರೆ. ಅವರು ಘೋಷಿಸಿರುವ ಇಂಟರ್ನ್‌ಶಿಪ್ ಯೋಜನೆಯು ಕಾಂಗ್ರೆಸ್ ಪ್ರಸ್ತಾಪಿಸಿದ್ದ 'ಪೆಹ್ಲಿ ನೌಕ್ರಿ ಪಕ್ಕಿ' ಎಂಬ ಹೆಸರಿನ ಅಪ್ರೆಂಟೈಸ್‌ಶಿಪ್ ಕಾರ್ಯಕ್ರಮ ಆಧರಿಸಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ" ಎಂದಿದ್ದಾರೆ.
ಇದು ಬಹಳ ತಡವಾಗಿದೆ ಮತ್ತು ಬಹಳ ಅಲ್ಪದ್ದಾಗಿದೆ. ಬಜೆಟ್ ಭಾಷಣವು ಕ್ರಿಯೆಗಿಂತಲೂ ತಪ್ಪುದಾರಿಗೆ ಎಳೆಯುವುದರತ್ತ ಹೆಚ್ಚು ಗಮನ ಹರಿಸಿದೆ" ಎಂದು ಕಾಂಗ್ರೆಸ್ ನಾಯಕ ಟೀಕಿಸಿದ್ದಾರೆ.
Advertisement