
ಮುಂಬೈ: 2013 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ನಂತರ ಪುಣೆಯ ನ್ಯಾಯಾಲಯವು ಮಂಗಳವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಜಾರಂಗೆ ಅವರು ಜುಲೈ 20 ರಿಂದ ಜಾಲ್ನಾ ಜಿಲ್ಲೆಯ ತಮ್ಮ ಗ್ರಾಮದಲ್ಲಿ ಮೀಸಲಾತಿ ಬೇಡಿಕೆಗಾಗಿ ಹೊಸದಾಗಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.
ಜಾರಂಗೆ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ ಮೇ 31 ರಂದು ಅವರು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ನಂತರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ನ್ನು ರದ್ದುಪಡಿಸಿತ್ತು. ಆದರೆ ರೂ.500 ದಂಡ ವಿಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಜಾರಂಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದರಿಂದ ವಿಚಾರಣೆಗೆ ಹಾಜರಾಗಲಿಲ್ಲ ಎಂದು ಅವರ ಪರ ವಕೀಲ ಹರ್ಷದ್ ನಿಂಬಾಳ್ಕರ್ ಹೇಳಿದರು. ಜಾರಂಗೆ ಅವರನ್ನು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಿ ಜಾಮೀನು ರಹಿತ ವಾರೆಂಟ್ ರದ್ದುಗೊಳಿಸುತ್ತೇವೆ ಎಂದು ಅವರು ತಿಳಿಸಿದರು.
ಜಾರಂಗೆ ಮತ್ತಿಬ್ಬರ ವಿರುದ್ಧ 2013ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಮತ್ತು 406 (ನಂಬಿಕೆ ದ್ರೋಹ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
Advertisement