
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರು ಒಂದೋ ಜೈಲಿಗೆ ಹೋಗುತ್ತಾರೆ ಅಥವಾ ನರಕಕ್ಕೆ ಕಳುಹಿಸಲಾಗುತ್ತದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಯಲ್ಲಿ ಹೇಳಿದರು.
ಇಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈ, ಕಳೆದ ಕೆಲವು ದಿನಗಳಲ್ಲಿ 28 ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಕೆಲವು ಭದ್ರತಾ ಸಿಬ್ಬಂದಿ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಎಂದು ಸದನಕ್ಕೆ ತಿಳಿಸಿದರು.
ಸಚಿವರ ಪ್ರಕಾರ, 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಸುಮಾರು 900 ಉಗ್ರರನ್ನು ಕೊಂದಿವೆ. "ಮೋದಿ ಸರ್ಕಾರವು ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನಾವು ಭಯೋತ್ಪಾದನೆಯನ್ನು ಕೊನೆಗೊಳಿಸುತ್ತೇವೆ. ಅವರು(ಭಯೋತ್ಪಾದಕರು) ಒಂದೋ ಜೈಲಿನಲ್ಲಿರುತ್ತಾರೆ ಇಲ್ಲವೇ ನರಕಕ್ಕೆ ಕಳುಹಿಸುತ್ತೇವೆ ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ" ಎಂದರು.
ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ 2004 ರಿಂದ 2014ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ 7,217 ಭಯೋತ್ಪಾದನೆಯ ಘಟನೆಗಳು ನಡೆದಿವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2014 ರಿಂದ ಈ ವರ್ಷ ಜುಲೈ 21 ರ ವರೆಗೆ 2,259 ಉಗ್ರರ ದಾಳಿಗಳು ನಡೆದಿವೆ ಎಂದು ರೈ ಹೇಳಿದರು. ಆದರೆ, ಈ ಘಟನೆಗಳು ನಡೆಯಬಾರದಿತ್ತು ಎಂದರು.
ಉಗ್ರರ ದಾಳಿಯಲ್ಲಿ 2004 ರಿಂದ 2014 ರ ನಡುವೆ 2,829 ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ 2014 ರಿಂದ ಶೇ. 67 ರಷ್ಟು ಕಡಿಮೆಯಾಗಿದೆ. ಜೊತೆಗೆ, ಭಯೋತ್ಪಾದಕ ಘಟನೆಗಳಲ್ಲಿ ಶೇ. 69 ರಷ್ಟು ಕಡಿಮೆಯಾಗಿದೆ ಎಂದು ರೈ ಸದನಕ್ಕೆ ತಿಳಿಸಿದರು.
Advertisement