
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ವಿವಾದಿತ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UGಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಸರಿಯಾದ ಉತ್ತರಗಳಿವೆ ಎಂದು ಎನ್‌ಟಿಎ ಹೇಳಿದ್ದ ಭೌತಶಾಸ್ತ್ರದ ಪ್ರಶ್ನೆಯ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಫಲಿತಾಂಶ ಪ್ರಕಟಿಸಲಾಗಿದೆ.
"ಮರು ಪರಿಷ್ಕೃತ ಸ್ಕೋರ್ ಕಾರ್ಡ್‌ಗಳು ಇದೀಗ ಲೈವ್ ಆಗಿವೆ" ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಟಾಪರ್ ಎಂದು ಘೋಷಿಸಲ್ಪಟ್ಟ 67 ಅಭ್ಯರ್ಥಿಗಳ ಪೈಕಿ 44 ಅಭ್ಯರ್ಥಿಗಳು ಆ ನಿರ್ದಿಷ್ಟ ಭೌತಶಾಸ್ತ್ರದ ಪ್ರಶ್ನೆಗೆ ನೀಡಲಾದ ಅಂಕಗಳಿಂದಾಗಿ ಪೂರ್ಣ ಅಂಕಗಳನ್ನು ಗಳಿಸಿದ್ದಾರೆ.
ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಮಯದ ನಷ್ಟವನ್ನು ಸರಿದೂಗಿಸಲು ಆರು ಅಭ್ಯರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳನ್ನು ಏಜೆನ್ಸಿ ಹಿಂತೆಗೆದುಕೊಳ್ಳುವುದರೊಂದಿಗೆ ಟಾಪರ್‌ಗಳ ಸಂಖ್ಯೆಯನ್ನು 61ಕ್ಕೆ ಇಳಿಸಲಾಗಿದೆ.
ಮೇ 5 ರಂದು ನಡೆದಿದ್ದ ವಿವಾದಿತ ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಮತ್ತು ಮರು-ಪರೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕಳೆದ ಮಂಗಳವಾರ ವಜಾಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
NEET-UG ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಇದುವರೆಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ.
Advertisement