
ಜಮ್ಮು: ಈ ಬಾರಿ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಅಮರನಾಥ ಯಾತ್ರೆ ಸಾಕಷ್ಟು ಬಿಗಿ ಭದ್ರತೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಸೋಮವಾರ ಜಮ್ಮು ಬೇಸ್ ಕ್ಯಾಂಪ್ ನಿಂದ 1,800 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲಕ್ಕೆ ತೆರಳಿದ್ದಾರೆ.
1,832 ಯಾತ್ರಾರ್ಥಿಗಳ 32 ನೇ ಬ್ಯಾಚ್ ಭಗವತಿ ನಗರ ಮೂಲ ಶಿಬಿರದಿಂದ ಮುಂಜಾನೆ 3.22 ಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆ ಬೆಂಗಾವಲಾಗಿ 62 ವಾಹನಗಳ ಪಡೆಯಲ್ಲಿ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಗುಂಪಿನಲ್ಲಿ 1,358 ಪುರುಷರು, 363 ಮಹಿಳೆಯರು, ಇಬ್ಬರು ಮಕ್ಕಳು ಮತ್ತು 109 ಸಾಧುಗಳು ಮತ್ತು ಸಾಧ್ವಿಗಳು ಸೇರಿದ್ದಾರೆ. ಈ ಪೈಕಿ 1,263 ಯಾತ್ರಾರ್ಥಿಗಳು ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿಮೀ ಮಾರ್ಗದ ಪಹಲ್ಗಾಮ್ ತಲುಪಿದರೆ, 569 ಮಂದಿ ಗಂದರ್ಬಾಲ್ ಜಿಲ್ಲೆಯ ಚಿಕ್ಕದಾದ ಆದರೆ ಕಡಿದಾದ 14-ಕಿಮೀ ಬಾಲ್ಟಾಲ್ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ 4.55 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ಗುಹಾ ದೇಗುಲದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಹಿಮಲಿಂಗದ ದರ್ಶನ ಪಡೆದಿದ್ದರು.
ಜೂನ್ 28 ರಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಮ್ಮುವಿನಿಂದ ಯಾತ್ರಿಕರ ಮೊದಲ ಬ್ಯಾಚ್ ಗೆ ಚಾಲನೆ ನೀಡಿದ್ದರು. ಅಲ್ಲಿಂದ ಈವರೆಗೂ ಒಟ್ಟು 1,38,816 ಯಾತ್ರಿಕರು ಇಲ್ಲಿನ ಮೂಲ ಶಿಬಿರದಿಂದ ವಾರ್ಷಿಕ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾರೆ. ಜೂನ್ 29 ರಂದು ಕಾಶ್ಮೀರದ ಬಲ್ಟಾಲ್ ಮತ್ತು ಪಹಲ್ಗಾಮ್ ಮೂಲ ಶಿಬಿರಗಳಿಂದ ಔಪಚಾರಿಕವಾಗಿ ಪ್ರಾರಂಭವಾದ 52 ದಿನಗಳ ಯಾತ್ರೆಯು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.
Advertisement