
ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇಂದು ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮತ್ತೊಮ್ಮೆ ಸಂಸತ್ ನ ಕಾರ್ಯವಿಧಾನದ ನಿಯಮಗಳನ್ನು ಓದುವಂತೆ ಸಲಹೆ ನೀಡಿದರು.
ಲೋಕಸಭೆಯ ಸದಸ್ಯರಲ್ಲದ ವ್ಯಕ್ತಿಗಳನ್ನು ಉಲ್ಲೇಖಿಸಿದ್ದೂ ಅಲ್ಲದೇ ಬಜೆಟ್ ಕುರಿತ ತಮ್ಮ ಭಾಷಣದಲ್ಲಿ ಫೋಟೋಗಳನ್ನು ಪ್ರದರ್ಶಿಸಲು ಅನುಮತಿ ಕೇಳಿದರು.
ನೀವು ವಿಪಕ್ಷದ ನಾಯಕರಿದ್ದೀರಿ. ಸಂಸತ್ ಕಾರ್ಯವಿಧಾನದ ನಿಯಮವನ್ನು ಕನಿಷ್ಠ ಮತ್ತೊಮ್ಮೆ ಓದಿ ಎಂಬ ಸಲಹೆ ನೀಡುತ್ತೇನೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದ ಅಂಶಗಳಿಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಹೇಳಿದ ಅಂಶಗಳನ್ನು ಕೇಳಲು ರಾಹುಲ್ ಗಾಂಧಿ ನಿರಾಕರಿಸಿದ ಕಾರಣ ಸ್ಪೀಕರ್ ಓಂ ಬಿರ್ಲಾ ರಾಹುಲ್ ಗಾಂಧಿಯವರಿಗೆ ಕಾರ್ಯವಿಧಾನದ ನಿಯಮಗಳನ್ನು ಹಲವಾರು ಬಾರಿ ನೆನಪಿಸಬೇಕಾಯಿತು.
ನಾವು ಮಾತನಾಡಲು ಬಯಸಿ ಕೈ ಎತ್ತಿದ್ದಾಗ ಪ್ರಧಾನಿ ನಮ್ಮ ಮಾತನ್ನು ಕೇಳಿದರೆ, ಅವರು (ಆಡಳಿತ ಪಕ್ಷದ ನಾಯಕರು) ಹೇಳಿದ್ದನ್ನು ನಾವೂ ಕೇಳುತ್ತೇವೆ ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದರು.
ಸಂಸತ್ತಿನ ಹಿಂದಿನ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳ ಉದ್ದಕ್ಕೂ ಪ್ರತಿಪಕ್ಷಗಳು ಅಡ್ಡಿಪಡಿಸಿದವು ಎಂದು ರಿಜಿಜು ಗಾಂಧಿಗೆ ನೆನಪಿಸಿದರು.
Advertisement