
ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಯನ್ನು ಆತನೊಂದಿಗೆ ಇದ್ದ ಐವರು ಸಹ ಕೈದಿಗಳೇ ಹತ್ಯೆ ಮಾಡಿರುವ ಘಟನೆ ಕೋಲ್ಹಾಪುರದ ಕಲಂಬಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಮೇಲ್ನೋಟಕ್ಕೆ ಜೈಲಿನಲ್ಲಿ ಸ್ನಾನ ಮಾಡುವುದಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು 59 ವರ್ಷದ ಮುನ್ನ ಅಲಿಯಾಸ್ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ ಭವರ್ಲಾಲ್ ಗುಪ್ತಾ ವಿರುದ್ಧ 5 ಮಂದಿ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಾಂಬ್ ಸ್ಫೋಟ ಪ್ರಕರಣದಲ್ಲಿ ಖಾನ್ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದರು. ವಾಗ್ವಾದ ನಡೆಯುತ್ತಿದ್ದಾಗ ವಿಚಾರಣಾಧೀನ ಕೈದಿಯೋರ್ವ ಚರಂಡಿಗೆ ಹಾಕಲಾಗಿದ್ದ ಕಬ್ಬಿಣದ ಪೈಪ್ ಎಳೆದು ಖಾನ್ ತಲೆಗೆ ಬಲವಾಗಿ ಪ್ರಹಾರ ಮಾಡಿದ್ದಾನೆ.
ಪರಿಣಾಮ ಕುಸಿದುಬಿದ್ದು ಖಾನ್ ಸಾವನ್ನಪ್ಪಿದ್ದಾನೆ. ಘಟನೆ ನಡೆಯುತ್ತಿದ್ದಂತೆಯೇ ಖಾನ್ ನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆ ವೇಳೆಗೆ ಸಾವನ್ನಪ್ಪಿದ್ದ. ದಾಳಿಕೋರರನ್ನು ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ್, ದೀಪಕ್ ನೇತಾಜಿ ಖೋಟ್, ಸಂದೀಪ್ ಶಂಕರ್ ಚವಾಣ್, ಋತುರಾಜ್ ವಿನಾಯಕ್ ಇನಾಮದಾರ್ ಮತ್ತು ಸೌರಭ್ ವಿಕಾಸ್ ಎಂದು ಗುರುತಿಸಲಾಗಿದೆ.
Advertisement