
ನವದೆಹಲಿ: ಲೋಕಸಭಾ ಚುನಾವಣೆ 2024 ರ ಮತ ಎಣಿಕೆ-ಫಲಿತಾಂಶ ಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಈ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೈಕೋರ್ಟ್ ನ 7 ನಿವೃತ್ತ ನ್ಯಾಯಾಧೀಶರು ಪತ್ರ ಬರೆದಿರುವುದು ಮಹತ್ವ ಪಡೆದುಕೊಂಡಿದೆ.
ಫಲಿತಾಂಶದ ಬಳಿಕ ಪ್ರಜಾಪ್ರಭುತ್ವದ ಸ್ಥಾಪಿತ ಮಾದರಿಯನ್ನು ಪಾಲನೆ ಮಾಡಿ, ಚುನಾವಣಾ ಪೂರ್ವದಲ್ಲಿ ಏರ್ಪಟ್ಟಿದ್ದ ಮೈತ್ರಿಕೂಟದ ಪೈಕಿ ಯಾರಿಗೆ ಅತಿ ಹೆಚ್ಚು ಸ್ಥಾನಗಳು ಬರುವುದೋ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಹಾಗೂ ಒಂದು ವೇಳೆ ಅತಂತ್ರ ಫಲಿತಾಂಶವಾದರೆ, ಸಂಸದರ ಖರೀದಿಯನ್ನು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ತಡೆಗಟ್ಟಬೇಕೆಂದು ಪತ್ರದಲ್ಲಿ ನಿವೃತ್ತ ನ್ಯಾಯಾಧೀಶರು ಮನವಿ ಮಾಡಿದ್ದಾರೆ.
ಪ್ರಸ್ತುತ ಆಡಳಿತವು ಜನಾದೇಶವನ್ನು ಕಳೆದುಕೊಂಡರೆ, ಸುಗಮ ಅಧಿಕಾರದ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಂವಿಧಾನವನ್ನು ಎತ್ತಿಹಿಡಿಯಬೇಕು ಎಂದು ನಿವೃತ್ತ ನ್ಯಾಯಮೂರ್ತಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ನಿವೃತ್ತ ನ್ಯಾಯಾಧೀಶರು ಒತ್ತಾಯಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ 6 ಮಾಜಿ ನ್ಯಾಯಾಧೀಶರಾದ ಜಿಎಂ ಅಕ್ಬರ್ ಅಲಿ, ಅರುಣಾ ಜಗದೀಸನ್, ಡಿ ಹರಿಪರಂತಮನ್, ಪಿ ಆರ್ ಶಿವಕುಮಾರ್, ಸಿ ಟಿ ಸೆಲ್ವಂ, ಎಸ್ ವಿಮಲಾ ಮತ್ತು ಪಾಟ್ನಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್ ಅವರು ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪ್ರಸ್ತುತ ಆಡಳಿತ ಜನರ ಆದೇಶವನ್ನು ಕಳೆದುಕೊಂಡರೆ, ಅಧಿಕಾರದ ಪರಿವರ್ತನೆಯು ಸುಗಮವಾಗಿರುವುದಿಲ್ಲ ಮತ್ತು ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು ಎಂಬ "ನಿಜವಾದ ಕಾಳಜಿ"ಯಿಂದ ಪತ್ರ ಬರೆಯುತ್ತಿರುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
Advertisement