
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಈ ಬಾರಿ ಬಹುಮತ ಗಳಿಸದೇ ಇರುವುದರಿಂದ ಪ್ರಧಾನಿ ಮೋದಿ ತಾವಾಗಿಯೇ ಹುದ್ದೆಯಿಂದ ಕೆಳಗಿಳಿಯಬೇಕು. ಯಾವುದೇ ಆತ್ಮಗೌರವ ಇರುವ ನಾಯಕ ತಾನೇ ಮುಂದಾಗಿ ಹುದ್ದೆ ತೊರೆಯಬೇಕೇ ಹೊರತು, ಹೊರ ದಬ್ಬಿಸಿಕೊಳ್ಳಬಾರದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಮನಸ್ಥಿತಿಯಿಂದಾಗಿ ಬಿಜೆಪಿ ಕಂದಕಕ್ಕೆ ಉರುಳಿದೆ. ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮೋದಿ ಹಿಂದೆ ಸರಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ. 2019ರ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳನ್ನು ಗಳಿಸಲಷ್ಟೆ ಶಕ್ತವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 63 ಸ್ಥಾನಗಳ ನಷ್ಟ ಅನುಭವಿಸಿದೆ. ಹೀಗಾಗಿ ಕೇಂದ್ರದಲ್ಲಿ ಸರಕಾರ ರಚಿಸಲು ಮೈತ್ರಿಪಕ್ಷಗಳನ್ನು ಆಧರಿಸಬೇಕಾದ ಪರಿಸ್ಥಿತಿ ಬಿಜೆಪಿಗೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿಯವರ ಟೀಕೆ ಮಾಡಿದ್ದಾರೆ.
ಬಿಜೆಪಿ 220 ಸ್ಥಾನ ಗಳಿಸಲಿದೆ ಎಂಬ ನನ್ನ ಅಂದಾಜು, ಪಕ್ಷ ಗಳಿಸಿರುವ 237ಕ್ಕೆ ಹತ್ತಿರವಾಗಿದೆ. ನಾನು ನೀಡಿದ್ದ ಸಲಹೆಗಳನ್ನು ಪಾಲಿಸಿದ್ದರೆ ಬಿಜೆಪಿ 300 ಸೀಟುಗಳನ್ನು ಗಳಿಸಬಹುದಿತ್ತು. ಕಾಂಗ್ರೆಸ್ ಬಹುಮತ ಕಳೆದುಕೊಂಡಾಗ ರಾಜೀವ್ ಗಾಂಧಿ ರಾಜೀನಾಮೆ ನೀಡಿದ್ದರು. ಬಹುಮತಕ್ಕಾಗಿ ಸಣ್ಣ ಪಕ್ಷಗಳನ್ನು ಬೇಡಿಕೊಳ್ಳಲು ನಿರಾಕರಿಸಿದ್ದರು ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
Advertisement