
ಅಮೇಥಿ: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಸೋಲಿಸಿ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.
ಅಮೇಥಿ ಸಂಸತ್ ಕ್ಷೇತ್ರ ಗಾಂಧಿ ಕುಟುಂಬದ ಭದ್ರಕೋಟೆ (ವಿಶ್ವಾಸಾರ್ಹ ಕ್ಷೇತ್ರ)ವಾಗಿದ್ದು, ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಿಶೋರಿ ಲಾಲ್ ಶರ್ಮಾ ಹೇಳಿದ್ದಾರೆ.
ಕಿಶೋರಿ ಲಾಲ್ ಶರ್ಮಾ ಸ್ಮೃತಿ ಇರಾನಿ ವಿರುದ್ಧ 1.67 ಲಕ್ಷ ಮತಗಳಿಂದ ಗೆದ್ದಿದ್ದಾರೆ. ಪಿಟಿಐ ಗೆ ಸಂದರ್ಶನ ನೀಡಿರುವ ಕಿಶೋರಿ ಲಾಲ್ ಶರ್ಮಾ, ರಾಜಕೀಯದಲ್ಲಿ ಸೇಡು ಎಂಬುದು ಇಲ್ಲ. ಅದು ಒಂದು ರೀತಿಯ ಕ್ರೀಡಾ ಮನೋಭಾವನೆ. ಒಬ್ಬರು ಗೆಲ್ಲುತ್ತಾರೆ. ಮತ್ತೊಬ್ಬರು ಸೋಲುತ್ತಾರೆ, ನಾವು ಸೇಡೆಂಬುದನ್ನೆಲ್ಲಾ ಗಮನಿಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಬಗ್ಗೆಯೂ ಮಾತನಾಡಿರುವ ಕಿಶೋರಿ ಲಾಲ್, ರಾಹುಲ್ ಗಾಂಧಿ ವಯನಾಡು, ರಾಯ್ ಬರೇಲಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಷಯವಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಅಮೇಥಿಯಲ್ಲಿನ ತಮ್ಮ ಗೆಲುವು ಜನತೆ ಹಾಗೂ ಗಾಂಧಿ ಕುಟುಂಬದ ಗೆಲುವಾಗಿದೆ ಎಂದು ಶರ್ಮಾ ಹೇಳಿದ್ದು, ರಾಹುಲ್ ಗಾಂಧಿಯಿಂದ ಮಾರ್ಗದರ್ಶನ ಪಡೆಯುತ್ತೇನೆ ಎಂದಿದ್ದಾರೆ. ರಾಯ್ ಬರೇಲಿ ಹಾಗೂ ಅಮೇಥಿಗಳಿಗೆ ಈ ಹಿಂದೆ ಶರ್ಮಾ ಸಂಸದರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.
Advertisement