
ನವದೆಹಲಿ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಹಸೀನಾ ಮತ್ತು ನೇಪಾಳ ಪ್ರಧಾನಿ ದಹಲ್ ಇಬ್ಬರೂ ಈ ಹಿಂದೆ ಮೂರನೇ ಬಾರಿ ಭಾರತದ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದರು. ಅಲ್ಲದೆ ಪ್ರಧಾನಿ ಮೋದಿ ಅವರು ಸಹ ದಹಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು.
ಬುಧವಾರದ ದೂರವಾಣಿ ಸಂಭಾಷಣೆಯಲ್ಲಿ ಪ್ರಧಾನಿ ಮೋದಿ, ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುವಂತೆ ನೇಪಾಳ ಪ್ರಧಾನಿಗೆ ಆಹ್ವಾನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
"ಬುಧವಾರ ಸಂಜೆ ಇಬ್ಬರು ನಾಯಕರ ನಡುವಿನ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ನೇಪಾಳ ಪ್ರಧಾನಿಗೆ ಆಹ್ವಾನವನ್ನು ನೀಡಲಾಯಿತು. ನೇಪಾಳ ಪ್ರಧಾನಿ ಕೂಡ ಸಮಾರಂಭದಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದರು" ಎಂದು ಹಿರಿಯ ಅಧಿಕಾರಿಯೊಬ್ಬರು ANI ಗೆ ತಿಳಿಸಿದ್ದಾರೆ.
ಇನ್ನು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಸ್ವೀಕರಿಸಿದ್ದು, ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ನಾಳೆ ಢಾಕಾದಿಂದ ದೆಹಲಿಗೆ ತೆರಳುತ್ತಿದ್ದಾರೆ" ಎಂದು ಶೇಖ್ ಹಸೀನಾ ಅವರ ಭಾಷಣ ಬರಗಾರ ಎಂ ನಜ್ರುಲ್ ಇಸ್ಲಾಂ ಅವರು ಎಎನ್‌ಐಗೆ ತಿಳಿಸಿದ್ದಾರೆ.
Advertisement