
ಲಖನೌ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಹೇಳಿದ್ದಾರೆ.
400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಘೋಷಣೆ ನೀಡಿದ್ದ ಬಿಜೆಪಿ ಸಂಪೂರ್ಣ ಬಹುಮತದಿಂದ ವಂಚಿತವಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗವನ್ನು ನಿಯಂತ್ರಿಸಲಾಗುತ್ತಿಲ್ಲ. ರೈತರು, ಯುವಕರು, ಉದ್ಯಮಿಗಳು, ಶಿಕ್ಷಕರು, ವಕೀಲರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವೂ ತೊಂದರೆಗೀಡಾಗಿದೆ. ಅವರ ಭವಿಷ್ಯವು ಕತ್ತಲೆಯಲ್ಲಿದೆ ಎಂದು ಸಮಾಜವಾದಿ ಪಕ್ಷ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹೇಳಿದೆ.
‘ಅಗ್ನಿವೀರ್ ಯೋಜನೆಯನ್ನು ಕೂಡಲೇ ಅಂತ್ಯಗೊಳಿಸಬೇಕು, ಸೇನೆಗೆ ಸೇರಲು ಇಚ್ಛಿಸುವ ಹಾಗೂ ವಯಸ್ಸು ಮುಗಿದಿರುವ ಯೋಧರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಅಯೋಧ್ಯೆಯಲ್ಲಿನ ಜನರು ಬಿಜೆಪಿಯ ಭರವಸೆಯನ್ನು ಹುಸಿಗೊಳಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ. ‘‘ಅಯೋಧ್ಯೆಯ ಜನರು ನೋವಿನಲ್ಲೇ ಉಳಿದಿದ್ದಾರೆ. ಬಿಜೆಪಿ ಸರಕಾರ ಬಡವರನ್ನು ಸ್ಥಳಾಂತರಿಸಿತು, ಆದರೆ, ನಿರಾಶ್ರಿತ ರೈತರಿಗೆ ಸೂಕ್ತ ಪರಿಹಾರವನ್ನೂ ನೀಡಿಲ್ಲ. "ತಮ್ಮ ಭೂಮಿಯಿಂದ ನಿರಾಶ್ರಿತರಾದ ಜನರ ಪುನರ್ವಸತಿ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇಂಡಿಯಾ ಬಣ ಈಗ ಜನರ ಆಕಾಂಕ್ಷೆಗಳ ಸಂಕೇತವಾಗಿದೆ. ಇದು ಜನರ ಸೇವೆ ಮಾಡಲು ಬದ್ಧವಾಗಿದೆ. ಸಂವಿಧಾನ ಉಳಿಸಲು ಮತ್ತು ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರದ ನೋವು, ಬಿಕ್ಕಟ್ಟಿನಿಂದ ಜನರನ್ನು ಮುಕ್ತಗೊಳಿಸಲು ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
Advertisement