
ನವದೆಹಲಿ: ಸಚಿವ ಸ್ಥಾನ ಮತ್ತು ಖಾತೆಗಳ ಕುರಿತ ಮಾಧ್ಯಮ ವರದಿಗಳಿಗೆ ಬಲಿಯಾಗಬೇಡಿ. "ಇಂಡಿಯಾ ಬಣ" ಕೂಡ ಅಂತಹ ವಿಷಯಗಳ ಬಗ್ಗೆ "ನಕಲಿ ಸುದ್ದಿ" ಹರಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಎನ್‌ಡಿಎ ಸಂಸದರಿಗೆ ಸಲಹೆ ನೀಡಿದ್ದಾರೆ.
ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದೆರಡು ದಿನಗಳಿಂದ ಟಿವಿಯಲ್ಲಿ ಪ್ರಸಾರವಾಗುತ್ತಿರುವ ವಿಷಯಗಳಲ್ಲಿ ಯಾವುದೇ ಸತ್ಯ ಕಂಡುಬಂದಿಲ್ಲ.
ಅಂತಹ ಮಾಹಿತಿಯನ್ನು ಎಲ್ಲಿಂದ ಪಡೆಯುತ್ತಾರೆ ಎಂದು ಅವರನ್ನು ಕೇಳಬೇಕು. ಕಳೆದ 10 ವರ್ಷಗಳಲ್ಲಿ ಇಂತಹ ಸಂದರ್ಭ ಬಂದಿರಲಿಲ್ಲ ಎಂದು ಹೇಳಿದರು.
ಕೆಲವರು ನಿಮ್ಮನ್ನು ಸಂಪರ್ಕ ಮಾಡಿ, ನನಗೆ ದೊಡ್ಡ ಮಟ್ಟದ ಕಾಂಟೆಕ್ಟ್ಸ್ ಇವೆ. ನಿಮ್ಮನ್ನು ಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ನೀವು ಅದನ್ನು ನಂಬಬೇಡಿ.
ಈಗ ತಂತ್ರಜ್ಞಾನವು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ಜನ ನನ್ನ ಸಹಿಯೊಂದಿಗೆ ಸಚಿವರ ಪಟ್ಟಿಯನ್ನೇ ಹೊರತರಬಹುದು. ಇನ್ನು ಕೆಲವು ಬುದ್ಧಿವಂತರು ಖಾತೆಗಳನ್ನು ಸಹ ಹಂಚಿ ಮಾಡಬಹುದು ಎಂದು ಮೋದಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಸರ್ಕಾರ ರಚನೆಯಲ್ಲಿ ನಿರತರಾಗಿದ್ದಾರೆ. ಸಚಿವ ಸ್ಥಾನ ಮತ್ತು ಖಾತೆಗಳನ್ನು ಹಂಚುವುದರಲ್ಲಿ ನಿರತರಾಗಿದ್ದಾರೆ. ಮೋದಿಯನ್ನು ಬಲ್ಲವರು, ಅಂತಹ ಪ್ರಯತ್ನಗಳೆಲ್ಲವೂ ನಿಷ್ಪ್ರಯೋಜಕವೆಂದು ತಿಳಿಯಿರಿ. ನಿಮಗೆ ಫೋನ್ ಕರೆ ಮಾಡಿದರೆ, ಅವರು ಸಂಬಂಧಪಟ್ಟ ಪ್ರಾಧಿಕಾರದಿಂದ ಬಂದವರು ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಎಂದು ಮೋದಿ ಸಲಹೆ ನೀಡಿದರು.
"ಕೆಲವರು ಇಂತಹ ವದಂತಿಗಳನ್ನು ಹರಡುವುದರಲ್ಲಿ ತೊಡಗಿದ್ದಾರೆ. ಕೆಲವರು ಇದನ್ನು ಅಭ್ಯಾಸವಾಗಿ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಮನರಂಜನೆಗಾಗಿ ಮಾಡುತ್ತಾರೆ. ಆದರೆ ಕೆಲವರು ದುರುದ್ದೇಶದಿಂದ ಮಾಡುತ್ತಾರೆ. ಇಂತಹ ಪಿತೂರಿಗಳಿಗೆ ಬಲಿಯಾಗದಂತೆ ನಾನು ಎಲ್ಲಾ ಸಂಸದರನ್ನು ಕೋರುತ್ತೇನೆ" ಎಂದು ಹೇಳಿದರು.
ಲೋಕಸಭೆ ಚುನಾವಣೆಯ ಸಮಯದಲ್ಲಿ, "ಇಂಡಿಯಾ ಬಣ" "ನಕಲಿ ಸುದ್ದಿ" ಹರಡುವಲ್ಲಿ ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದರು ಮತ್ತು ಅದರಲ್ಲಿ ಅವರು "ಡಬಲ್ ಪಿಎಚ್‌ಡಿ" ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
Advertisement