
ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೃತೀಯಲಿಂಗಿ ಸಮುದಾಯದ ಸುಮಾರು 50 ಮಂದಿ, ಸ್ವಚ್ಛತಾ ಕಾರ್ಮಿಕರು, ಪೌರ ಕಾರ್ಮಿಕರಿಗೆ ಆಹ್ವಾನ ನೀಡಲಾಗಿದೆ. ಅವರು ನೂತನ ಸಚಿವ ಸಂಪುಟದ ಪ್ರಧಾನಿ ಮತ್ತು ಸದಸ್ಯರಿಗೆ ಆಶೀರ್ವಾದ ಮಾಡಲಿದ್ದಾರೆ.
ಸಮಾರಂಭಕ್ಕೂ ಮುನ್ನ ಬಿಜೆಪಿ ಸಂಸದ ಹಾಗೂ ಮಾಜಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ತಮ್ಮ ನಿವಾಸದಲ್ಲಿ ಸಮುದಾಯದವರನ್ನು ಸನ್ಮಾನಿಸಿದರು.
ಇದು ಪ್ರಧಾನಿ ಮೋದಿಯವರ 'ಸಬ್ಕಾ ಸಾಥ್ ಸಬ್ಕಾ ವಿಶ್ವಾಸ್ ಮತ್ತು ಸಭಾ ಪ್ರಯಾಸ್'ನ ಒಂದು ಭಾಗವಾಗಿದೆ. ಸಮಾರಂಭದಲ್ಲಿ ತೃತೀಯಲಿಂಗ ಸಮುದಾಯದ ಜನರನ್ನು ಸೇರಿಸಿಕೊಳ್ಳುವ ಉದ್ದೇಶ ಪ್ರಧಾನಮಂತ್ರಿಯವರ ಎಲ್ಲರನ್ನೂ ಒಳಗೊಳ್ಳುವಿಕೆಯ ಆಶಯದ ಸಂದೇಶವನ್ನು ತಲುಪಿಸುವುದಾಗಿದೆ ಎಂದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ತೃತೀಯಲಿಂಗ ಸಮುದಾಯದವರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ, ಇವರು ಸಮಾಜದ ಸಬಲೀಕರಣದಲ್ಲಿ ಕೊಡುಗೆ ನೀಡಿದ್ದಾರೆ ಎಂದು ವೀರೇಂದ್ರ ಕುಮಾರ್ ಹೇಳಿದರು.
ಹೊಸ ಸರ್ಕಾರಕ್ಕೆ ಆಶೀರ್ವಾದ ನೀಡಲು ತೃತೀಯಲಿಂಗ ಸಮುದಾಯದ 50 ಸದಸ್ಯರೊಂದಿಗೆ ಇಲ್ಲಿಗೆ ಬಂದಿದ್ದೇವೆ ಎಂದು ಸೋನಮ್ ಕಿನ್ನಾರ್ ಹೇಳಿದರು.
ಜಾತಿ ಆಧಾರಿತ ರಾಜಕೀಯದಿಂದಾಗಿ ಪ್ರಧಾನಿ ಮೋದಿ ಅವರು ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಪಡೆಯದಿರುವುದು ನಮಗೆ ಬೇಸರ ತಂದಿದೆ ಆದರೆ ನಮಗೆ ಪ್ರಧಾನಿ ಮೇಲೆ ಸಂಪೂರ್ಣ ವಿಶ್ವಾಸವಿದೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದರು.
Advertisement