
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಭಾನುವಾರ ಸಂಜೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭಕ್ಕೆ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ಕಳುಹಿಸಲಾಗಿದೆ. ಸಮಾರಂಭದಲ್ಲಿ ಖರ್ಗೆ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಆದರೆ, ಮೋದಿ ಮತ್ತು ಅವರ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಯಾವುದೇ ವಿರೋಧ ಪಕ್ಷದ ನಾಯಕರು ಭಾಗವಹಿಸುತ್ತಿಲ್ಲ. ಎಡಪಕ್ಷಗಳ ನಾಯಕರಾದ ಸೀತಾರಾಂ ಯೆಚೂರಿ ಮತ್ತು ಡಿ ರಾಜಾ ಅವರು ಪ್ರಮಾಣ ವಚನ ಸಮಾರಂಭಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕಿ ಸಾಗರಿಕಾ ಘೋಷ್ ಅವರು ತಮ್ಮ ಆಮಂತ್ರಣ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೊಬ್ಬ ಟಿಎಂಸಿ ನಾಯಕ, ಪ್ರಮಾಣವಚನಕ್ಕೆ ನಮಗೆ ಆಹ್ವಾನಗಳು ಬಂದಿಲ್ಲ. ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿರುವಂತೆ ನಾವು ಪ್ರಮಾಣ ವಚನಕ್ಕೆ ಹಾಜರಾಗುತ್ತಿಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ನಿನ್ನೆ ಶನಿವಾರ ನಡೆದ ತಮ್ಮ ಪಕ್ಷದ ಸಂಸದರ ಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದ್ದರು.
ಇನ್ನು ಜೆಡಿಎಸ್ ವರಿಷ್ಠ ದೇವೇಗೌಡರು ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ಮೋದಿ 3.0 ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ.
Advertisement