
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದು 10 ಮಂದಿ ಯಾತ್ರಿಕರ ಸಾವಿಗೆ ಕಾರಣವಾದ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸೋಮವಾರ ಪ್ರದೇಶಗಳನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ನಿನ್ನೆ ಭಾನುವಾರ ಸಂಜೆ ಭಯೋತ್ಪಾದಕರ ಹೊಂಚುದಾಳಿ ನಂತರ ಆಳವಾದ ಕಮರಿಗೆ ಉರುಳಿತು.
ಶಿವ ಖೋರಿ ದೇವಸ್ಥಾನದಿಂದ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಪೋನಿ ಪ್ರದೇಶದ ತೆರ್ಯಾತ್ ಗ್ರಾಮದ ಬಳಿ ಕತ್ರಾ ಮಾರ್ಗವಾಗಿ ತೆರಳುತ್ತಿದ್ದಾಗ 53 ಆಸನಗಳ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಗುಂಡಿನ ದಾಳಿಗೆ ಬಸ್ ಚಾಲಕ ಸಮತೋಲನ ಕಳೆದುಕೊಂಡು ಪಕ್ಕದ ಆಳವಾದ ಕಂದಕಕ್ಕೆ ಉರುಳಿತು.
ಭಾರತೀಯ ಸೇನೆ, ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸೇರಿದಂತೆ ಭದ್ರತಾ ಪಡೆಗಳು ರಾಜೌರಿ ಜಿಲ್ಲೆಯ ಗಡಿಯಲ್ಲಿರುವ ತೆರಿಯಾತ್-ಪೋನಿ-ಶಿವ್ ಖೋರಿ ಪ್ರದೇಶದಲ್ಲು ಸುತ್ತುವರೆದು ಶೋಧಕಾರ್ಯ ನಡೆಸುತ್ತಿವೆ. ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳು ಸೇರಿದಂತೆ ಕಣ್ಗಾವಲು ಉಪಕರಣಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯ ತಂಡದಿಂದ ಶೋಧ: ಇದು ಉಗ್ರರ ಕುಕೃತ್ಯವಾಗಿರುವುದರಿಂದ ಬಸ್ ಮೇಲೆ ದಾಳಿ ನಡೆಸಿದ ಸ್ಥಳಕ್ಕೆ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ಆಗಮಿಸಿದೆ. ಈಗ ಡ್ರೋನ್ ಮೂಲಕ ಇಡೀ ಕಾಡನ್ನು ಸುತ್ತುವರೆಯಲಾಗಿದೆ, ಅಲ್ಲಿ ಎಲ್ಲಾದರೂ ಉಗ್ರರ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ಲಭ್ಯವಾಗುತ್ತದೆ. ಅಪಘಾತಕ್ಕೀಡಾದ ಬಸ್ ಶಿವ ಖೋಡಿಯಿಂದ ಹಿಂತಿರುಗುತ್ತಿತ್ತು. ಯಾತ್ರಾರ್ಥಿಗಳು ಶಿವಖೋಡಿಯಲ್ಲಿ ಭೋಲೆ ಬಾಬಾನ ದರ್ಶನ ಪಡೆದು ಕತ್ರಾಗೆ ಹಿಂತಿರುಗುತ್ತಿದ್ದರು.
ಉತ್ತರ ಪ್ರದೇಶದ ಹತ್ರಾಸ್‌ನಿಂದ ಬಂದ ಬಸ್‌ನೊಂದು ರಸ್ತೆಯಿಂದ ಹೊರಬಿದ್ದು ನೆರೆಯ ಅಖ್ನೂರ್ ಜಿಲ್ಲೆಯಲ್ಲಿ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಒಂಬತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 22 ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡು 57 ಮಂದಿ ಗಾಯಗೊಂಡ 10 ದಿನಗಳ ನಂತರ ಈ ಘಟನೆ ನಡೆದಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ಪ್ರಯಾಣಿಸುತ್ತಿದ್ದ ಬಸ್ ಪರ್ವತದ ರಸ್ತೆಯಿಂದ 300 ಅಡಿಗಳಷ್ಟು ಬೆಟ್ಟದಿಂದ ದೋಡಾ ಜಿಲ್ಲೆಯ ಮತ್ತೊಂದು ರಸ್ತೆಗೆ ಉರುಳಿದ ನಂತರ ಕನಿಷ್ಠ 39 ಪ್ರಯಾಣಿಕರು ಮೃತಪಟ್ಟು 17 ಮಂದಿ ಗಾಯಗೊಂಡಿದ್ದರು.
ರಾಷ್ಟ್ರಪತಿ ಖಂಡನೆ: ಯಾತ್ರಿಕರ ಮೇಲೆ ಉಗ್ರರ ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ನಡೆದ ಭಯೋತ್ಪಾದಕರ ದಾಳಿಯಿಂದ ನಾನು ದುಃಖಿತನಾಗಿದ್ದೇನೆ. ಈ ಕ್ರೂರ ಕೃತ್ಯವು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಮತ್ತು ಇದನ್ನು ಪ್ರಬಲ ಪದಗಳಲ್ಲಿ ಖಂಡಿಸಬೇಕು. ಸಂತ್ರಸ್ತರ ಕುಟುಂಬಗಳೊಂದಿಗೆ ರಾಷ್ಟ್ರ ನಿಂತಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ನೆರೆಯ ರಾಜೌರಿ ಮತ್ತು ರಿಯಾಸಿಯ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಪ್ರದೇಶವು ದಟ್ಟವಾದ ಅರಣ್ಯ ಪ್ರದೇಶಗಳು ಮತ್ತು ಆಳವಾದ ಕಮರಿಯನ್ನು ಹೊಂದಿದೆ.
ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗ್ರಾಮ ರಕ್ಷಣಾ ಸಮಿತಿಗಳನ್ನು ಸಹ ಸಜ್ಜುಗೊಳಿಸಲಾಗಿದೆ. ದಾಳಿಯಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿಗೆ ಗುಂಡಿನ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement