
ಗುವಾಹಟಿ: ಮಣಿಪುರ ಬಿಕ್ಕಟ್ಟನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಮನ ಹರಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಅಸ್ಸಾಂ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಂಗಳವಾರ ಹೇಳಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಬಗ್ಗೆ ಪ್ರಧಾನಿ ಮೋದಿ ಗಮನ ಹರಿಸುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಪ್ರಧಾನಿ ಮೋದಿ ಅವರು ಮಣಿಪುರ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾನೂನು ಜಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ” ಎಂದು ಗೊಗೊಯ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅದೃಷ್ಟವಶಾತ್, ಜನರು ಮಣಿಪುರದ ಪರವಾಗಿ ಮಾತನಾಡಲು ಮತ್ತು ಭಾರತೀಯ ಸಂಸತ್ತು ಮತ್ತು ಸಂವಿಧಾನವನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟವನ್ನು ಆಯ್ಕೆ ಮಾಡಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಬರೆದುಕೊಂಡಿದ್ದಾರೆ.
ಸೋಮವಾರ ನಾಗ್ಪುರದಲ್ಲಿ ನಡೆದ ಆರ್ ಎಸ್ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಮಣಿಪುರ ಶಾಂತಿಗಾಗಿ ಒಂದು ವರ್ಷದಿಂದ ಎದುರು ನೋಡುತ್ತಿದೆ. ಆದ್ಯತೆಯ ಮೇರೆಗೆ ಅಲ್ಲಿನ ಹಿಂಸಾಚಾರವನ್ನು ಕೊನೆಗಾಣಿಸಲು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದರು.
ಕಳೆದ 10 ವರ್ಷಗಳಿಂದ ಮಣಿಪುರ ಶಾಂತಿಯುತವಾಗಿತ್ತು. ಆದರೆ ಏಕಾಏಕಿ ಗನ್ ಸಂಸ್ಕೃತಿ ಮರಳಿ ಬಂದು ವಿಜೃಂಭಿಸಲು ಆರಂಭಿಸಿತು. ಚುನಾವಣೆಯ ಗುಂಗಿನಿಂದ ಹೊರಬಂದು ಈಗ ದೇಶ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾಗವತ್ ಸಲಹೆ ನೀಡಿದ್ದರು.
Advertisement