
ಜೈಪುರಬ್/ದೆಹಲಿ: ಅಮೇರಿಕಾ ಮೂಲದ ಮಹಿಳೆಗೆ ಕೃತಕ ಆಭರಣ ಮಾರಾಟದಲ್ಲಿ 6 ಕೋಟಿ ರೂಪಾಯಿ ಪಂಗನಾಮ ಹಾಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
300 ರೂಪಾಯಿಗಳ ಮೌಲ್ಯದ ಕೃತಕ ಆಭರಣವನ್ನು 6 ಕೋಟಿ ರೂಪಾಯಿಗಳಿಗೆ ಅಮೆರಿಕಾ ಪ್ರಜೆ ಚೆರಿಶ್ ಎಂಬಾಕೆಗೆ ಮಾರಾಟ ಮಾಡಲಾಗಿದೆ.
ಜೋಹ್ರಿ ಬಜಾರ್ ನಲ್ಲಿ ಈ ಘಟನೆ ನಡೆದಿದ್ದು, ಚಿನ್ನದ ಪಾಲಿಶ್ ಹಾಕಲಾಗಿದ್ದ ಬೆಳ್ಳಿ ಆಭರಣವನ್ನು ಆಕೆ ಖರೀದಿಸಿ ಮೋಸ ಹೋಗಿದ್ದಾರೆ. ಈಕೆ ಈ ಆಭರಣಗಳನ್ನು ಅಮೇರಿಕಾದ ಪ್ರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರದರ್ಶಿಸಿದ್ದಾರೆ. ಆ ಬಳಿಕ ಅದು ನಕಲಿ ಎಂದು ತಿಳಿದುಬಂದಿದ್ದು, ಮತ್ತೆ ಜೈಪುರಕ್ಕೆ ಆಗಮಿಸಿದ ಚೆರಿಶ್, ತನಗೆ ಆಭರಣಗಳನ್ನು ಮಾರಾಟ ಮಾಡಿದ್ದ ಗೌರವ್ ಸೋನಿ ಬಳಿ ವಿಚಾರಿಸಿದ್ದಾರೆ.
ಆಭರಣ ಅಂಗಡಿಯ ಮಾಲಿಕ ಗೌರವ್ ಆಕೆಯ ಆರೋಪಗಳನ್ನು ತಳ್ಳಿಹಾಕಿದ್ದು, ಈ ಬಳಿಕ ಅಮೇರಿಕಾ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಚೆರಿಶ್ ಅಮೇರಿಕಾ ರಾಯಭಾರ ಕಚೇರಿ ಅಧಿಕಾರಿಗಳ ನೆರವು ಪಡೆದಿದ್ದಾರೆ.
2022 ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಗೌರವ್ ಸೋನಿ ಕಳೆದ 2 ವರ್ಷಗಳಲ್ಲಿ ಈತನಿಗೆ 6 ಕೋಟಿ ರೂಪಾಯಿ ಪಾವತಿ ಮಾಡಿದ್ದೆ. ಆದರೆ ಆತ ನನಗೆ ಕೃತಕ ಆಭರಣಗಳನ್ನು ನೀಡಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.
ಪರಾರಿಯಾಗಿರುವ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ವ್ಯಕ್ತಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement