
ಗುವಾಹಟಿ: 36 ವರ್ಷಗಳ ಕಾಯುವಿಕೆಯ ನಂತರ, ಅರುಣಾಚಲ ಪ್ರದೇಶದ ಎರಡನೇ ಮಹಿಳಾ ಮಂತ್ರಿಯಾಗಿ ದಸಾಂಗ್ಲು ಪುಲ್ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ಕೊಮೊಲಿ ಮೊಸಾಂಗ್ ಅವರು 1988ರಲ್ಲಿ ಅರುಣಾಚಲದ ಮೊದಲು ಉಪ ಸಚಿವರಾಗಿ ನೇಮಕಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ನಂತರ 1990 ರಲ್ಲಿ ಅವರು ಕ್ಯಾಬಿನೆಟ್ ಸಚಿವರಾಗಿ ನೇಮಕಗೊಂಡರು.
ಇದೀಗ 36 ವರ್ಷಗಳ ನಂತರ 46 ವರ್ಷದ ದಾಸಾಂಗ್ಲು ಅರುಣಾಚಲದ ಎರಡನೇ ಮಹಿಳಾ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ಪತ್ನಿಯಾಗಿರುವ ದಾಸಾಂಗ್ಲು ಅವರು ಏಪ್ರಿಲ್ 19 ರ ವಿಧಾನಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ 10 ಬಿಜೆಪಿ ಅಭ್ಯರ್ಥಿಗಳಲ್ಲಿ ಅವರು ಒಬ್ಬರಾಗಿದ್ದಾರೆ.
ಪೇಮಾ ಖಂಡು ಸಂಪುಟದಲ್ಲಿ ಸಚಿವರಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ದಸಾಂಗ್ಲು ಅವರು, ನನಗೆ ಅತೀವ ಸಂತಸವಾಗಿದೆ. ರಾಜ್ಯದ ಮಹಿಳೆಯರು ಸಹ ಸಂತಸಗೊಂಡಿದ್ದಾರೆ.
ಬಿಜೆಪಿಯವರು ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಿದೆ. ರಾಜ್ಯದ ಮಹಿಳೆಯರ ಪರವಾಗಿ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ವರದಿಗಾರರಿಗೆ ತಿಳಿಸಿದರು.
"ಬಿಜೆಪಿ ಯಾವಾಗಲೂ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ. ನರೇಂದ್ರ ಮೋದಿ ಸರ್ಕಾರವು ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದೆ. ಇದು 2029 ರ ವೇಳೆಗೆ ಜಾರಿಗೆ ಬರಲಿದೆ. ಅರುಣಾಚಲ ವಿಧಾನಸಭೆಯಲ್ಲಿಯೂ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಇರುತ್ತದೆ ಎಂದು ಸಿಎಂ ಪೆಮಾ ಖಂಡು ಹೇಳಿದ್ದಾರೆ.
Advertisement