
ನವದೆಹಲಿ: 2010ರಲ್ಲಿ ಮಾಡಿದ್ದಾರೆ ಎನ್ನಲಾದ ಪ್ರಚೋದನಕಾರಿ ಭಾಷಣ ಆರೋಪದ ಮೇಲೆ ಲೇಖಕಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಮಾಜಿ ಪ್ರಾಧ್ಯಾಪಕರ ವಿರುದ್ಧ ಯುಎಪಿಎ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ದಾಖಲಾಗಿರುವ ಕೇಸ್ ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮುಂದಿನ ವಾರ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಅಕ್ಟೋಬರ್ 21, 2010 ರಂದು ಇಲ್ಲಿನ ಕೋಪರ್ನಿಕಸ್ ಮಾರ್ಗ್‌ನ ಎಲ್‌ಟಿಜಿ ಆಡಿಟೋರಿಯಂನಲ್ಲಿ 'ಆಜಾದಿ - ದಿ ಓನ್ಲಿ ವೇ' ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಸೆಂಟ್ರಲ್ ವಿವಿಯ ಮಾಜಿ ಪ್ರಾಧ್ಯಾಪಕ ಶೇಕ್ ಶೌಕತ್ ಹುಸೇನ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಎಫ್ ಐಆರ್ ದಾಖಲಾಗಿತ್ತು.
ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್ ಅವರು, ತಿಲಕ್ ಮಾರ್ಗದ ಠಾಣೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ದೂರು ಸಲ್ಲಿಸಿದ್ದರು. ಹೊಸದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಎಫ್ ಐಆರ್ ದಾಖಲಿಸಲು ಆದೇಶಿಸಿತ್ತು. ನಂತರ ಮುಂದಿನ ವಿಚಾರಣೆಗಾಗಿ ಕೇಸ್ ನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರಿಗೆ ವರ್ಗಾಯಿಸಲಾಗಿತ್ತು.
ಅನೇಕ ವಿಡಿಯೋಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯಗಳ ಆಧಾರದ ಮೇಲೆ ಅರುಂಧತಿ ರಾಯ್ ಹಾಗೂ ಹುಸೇನ್ ವಿರುದ್ಧ ಸುಮಾರು ಒಂದು ಸಾವಿರ ಪುಟಗಳಷ್ಟು ಚಾರ್ಜ್ ಶೀಟ್ ನ್ನು ದೆಹಲಿ ಕ್ರೈಮ್ ವಿಭಾಗದ ಪೊಲೀಸರು ಸಿದ್ಧಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅರ್ಧ ಡಜನ್ ನಷ್ಟು ಸಾಕ್ಷಿದಾರರು ಇರುವುದಾಗಿ ಪೊಲೀಸರು ಹೇಳಿರುವುದಾಗಿ ಮೂಲಗಳು ಹೇಳಿವೆ.
Advertisement