
ಶ್ರೀನಗರ: ಜಮ್ಮು-ಕಾಶ್ಮೀರದ ಪ್ರಸಿದ್ಧ ದಾಲ್ ಸರೋವರದ ದಡದ ಮೇಲೆ ನಡೆಯಲಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದ ವಿವಿಧ ಭಾಗಗಳಿಂದ ಸುಮಾರು 7,000ಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದಂದು ಕಾಶ್ಮೀರ ಕಣಿವೆಗೆ ಮೋದಿ ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರು ಜೂನ್ 21 ರಂದು ಪ್ರಸಿದ್ಧ ದಾಲ್ ಸರೋವರದ ದಡದಲ್ಲಿ ಸುಮಾರು 7 ಸಾವಿರ ಜನರೊಂದಿಗೆ ಯೋಗ ಮಾಡಲಿದ್ದಾರೆ ಎಂದು ಸಿನ್ಹಾ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಇದೇ ಕಾರಣದಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಶ್ರೀನಗರದಲ್ಲಿ ಆಚರಿಸಲು ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 23 ಲಕ್ಷ ಜನರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜನರಲ್ಲಿ ಯೋಗ ಮಾಡುವತ್ತ ಒಲವು ಹೆಚ್ಚಿರುವುದನ್ನು ನಾವು ನೋಡಬಹುದು. ಒತ್ತಡ ಮುಕ್ತ ಜೀವನಕ್ಕಾಗಿ ಜನರು ಯೋಗದತ್ತ ಒಲವು ತೋರುತ್ತಿದ್ದಾರೆ ಎಂದು ಅವರು ಹೇಳಿದರು.
Advertisement