
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಜನತಾ ಪಕ್ಷದ ಸಂಸದ ಭರ್ತೃಹರಿ ಮಹತಾಬ್ ಅವರನ್ನು 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಗುರುವಾರ ನೇಮಕ ಮಾಡಿದ್ದಾರೆ.
ಒಡಿಶಾದ ಬಿಜೆಪಿಯ ಪ್ರಮುಖ ನಾಯಕ ಭರ್ತೃಹರಿ ಮಹತಾಬ್ ಅವರು ಸ್ಪೀಕರ್ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ನೂತನ ಸಭಾಧ್ಯಕ್ಷರ ಆಯ್ಕೆಯಾಗುವವರೆಗೆ ಸ್ಪೀಕರ್ ಕರ್ತವ್ಯಗಳನ್ನು ನಿರ್ವಹಿಸಲು ಸಂವಿಧಾನದ 95 (1) ನೇ ವಿಧಿಯ ಅಡಿಯಲ್ಲಿ ಹಂಗಾಮಿ ಸ್ಪೀಕರ್ ಆಗಿ ಲೋಕಸಭೆಯ ಸದಸ್ಯ ಭರ್ತೃಹರಿ ಮಹತಾಬ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹಂಗಾಮಿ ಸ್ಪೀಕರ್ ಹುದ್ದೆಯನ್ನು ಲೋಕಸಭೆಯ ಸಂಪ್ರದಾಯದಂತೆ ಸಂಸತ್ತಿನ ಹಿರಿಯ ಸದಸ್ಯರಿಗೆ ನೀಡಲಾಗುತ್ತದೆ. ಸ್ಪೀಕರ್ ಹುದ್ದೆಗೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗುವುದಕ್ಕೂ ಮುನ್ನ ಹಂಗಾಮಿ ಸ್ಪೀಕರ್ ಅವರು ಪ್ರಧಾನಿ, ಕೇಂದ್ರ ಸಚಿವರಿಗೆ ಮತ್ತು ಎಲ್ಲ ಸಂಸದರಿಗೆ ಪ್ರಮಾಣ ವಚನ ಬೋಧಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ.
Advertisement