
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಕುರಿತು ದೆಹಲಿ ಜಲ ಸಚಿವೆ ಅತಿಶಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ದಕ್ಷಿಣ ದೆಹಲಿಯ ಭೋಗಲ್ ನ 'ಜಲ ಸತ್ಯಾಗ್ರಹ' ಸ್ಥಳದಿಂದ ವೀಡಿಯೊ ಸಂದೇಶ ನೀಡಿರುವ ಅತಿಶಿ, ನಗರದ ಜನರಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವವರೆಗೆ ತಾನು ಏನನ್ನೂ ತಿನ್ನುವುದಿಲ್ಲ. ನಗರದಲ್ಲಿ 28 ಲಕ್ಷ ಜನರಿಗೆ ನೀರಿನ ಕೊರತೆಯಿದೆ ಎಂದು ಅವರು ಹೇಳಿದ್ದಾರೆ.
ಯಮುನಾ ನದಿಯಲ್ಲಿ ದೆಹಲಿಯ ಪಾಲಿನ ಸರಿಯಾದ ನೀರನ್ನು ಹರಿಯಾಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಸಚಿವರು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಹರಿಯಾಣದಿಂದ ದಿನಕ್ಕೆ 110 ಮಿಲಿಯನ್ ಗ್ಯಾಲನ್ ಗಿಂತಲೂ (ಎಂಜಿಡಿ) ಕಡಿಮೆ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದರು.
ಒಂದು ಎಂಜಿಡಿ ನೀರು 28,000 ಜನರಿಗೆ ಒದಗಿಸುತ್ತದೆ. 100 ಎಂಜಿಡಿ ನೀರಿನ ಕೊರತೆ ಎಂದರೆ ದೆಹಲಿಯಲ್ಲಿ 28 ಲಕ್ಷ ಜನರಿಗೆ ನೀರು ಸಿಗುತ್ತಿಲ್ಲ. ನೀರಿಗಾಗಿ ದೆಹಲಿಯು ನೆರೆಯ ರಾಜ್ಯಗಳ ಮೇಲೆ ಅವಲಂಬಿತವಾಗಿದೆ. ನೆರೆಯ ರಾಜ್ಯಗಳಿಂದ ನದಿ, ಕಾಲುವೆ ಮೂಲಕ 1,005 ಎಂಜಿಡಿ ನೀರನ್ನು ಪಡೆಯುತ್ತದೆ. ಇದರಲ್ಲಿ ಹರಿಯಾಣ 613 ಎಂಜಿಡಿ ನೀರನ್ನು ಪೂರೈಸುತ್ತದೆ. ದೆಹಲಿ ತೀವ್ರ ಬೇಸಿಗೆಯ ಶಾಖ ಎದುರಿಸುತ್ತಿದ್ದು, ಹರಿಯಾಣ ತನ್ನ ಪಾಲನ್ನು 513 ಎಂಜಿಡಿಗೆ ಕಡಿಮೆ ಮಾಡಿರುವುದರಿಂದ ನಗರದ 28 ಲಕ್ಷ ಜನರು ತೊಂದರೆ ಎದುರಿಸುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Advertisement