
ಡೆಹ್ರಾಡೂನ್: ಉತ್ತರಾಖಂಡ್ ನ ಜೋಷಿಮಠ ಪುರಸಭೆ ತ್ಯಾಜ್ಯವನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿದೆ.
ಚಾರ್ ಧಾಮ್ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಈ ರೀತಿ ಬಿಟ್ಟು ಹೋದ ತ್ಯಾಜ್ಯದ ಪೈಕಿ 3 ಟನ್ ಪ್ಲಾಸ್ಟಿಕ್ ನ್ನು ಸಂಗ್ರಹಿಸಲಾಗಿದ್ದು, ಇದರ ಮರುಬಳಕೆಯ ಪ್ರಯತ್ನಗಳಿಂದಾಗಿ ಪುರಸಭೆಗೆ 1.2 ಕೋಟಿ ರೂಪಾಯಿ ಆದಾಯ ಬಂದಿದೆ.
ಪರಿಸರ ಸಂರಕ್ಷಣೆಯ ದೃಷ್ಟಿಕೋನದಿಂದ, ಈ ಉಪಕ್ರಮವು ಮಾಲಿನ್ಯವನ್ನು ತಗ್ಗಿಸಲು ಮಾತ್ರವಲ್ಲದೆ ಪುರಸಭೆಯ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಸಂಗ್ರಹಿಸಿದ ತ್ಯಾಜ್ಯದ ಬಹುಪಾಲು ಮಿನರಲ್ ವಾಟರ್ ಮತ್ತು ಯಾತ್ರಿಕರು ಮತ್ತು ಪ್ರವಾಸಿಗರು ರಸ್ತೆಬದಿಯಲ್ಲಿ ಬಿಟ್ಟುಹೋದ ತಂಪು ಪಾನೀಯ ಬಾಟಲಿಗಳನ್ನು ಒಳಗೊಂಡಿದೆ.
ಗೋಪೇಶ್ವರ ಮುನ್ಸಿಪಲ್ ಕಾರ್ಪೊರೇಶನ್‌ನ ಕಾರ್ಯನಿರ್ವಾಹಕ ಅಧಿಕಾರಿ ಪ್ರೀತಮ್ ಸಿಂಗ್ ನೇಗಿ ಮಾತನಾಡಿ, "ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಭೀಮತಲ್ಲಾ, ಖೇತ್ರಪಾಲ್, ಕೋಟಿಯಾ ಸೈನ್ ಮತ್ತು ಬದರಿನಾಥ್ ಮಾರ್ಗದ ಇತರ ಸ್ಥಳಗಳಿಂದ ಸಂಗ್ರಹಿಸಲಾಗುತ್ತದೆ" ಎಂದು TNIE ಗೆ ವಿವರಿಸಿದರು. ಗಂಗೋಲ್, ಸಾಗರ್, ಮಂಡಲ್, ಚೋಪ್ಟಾ ಮತ್ತು ರುದ್ರನಾಥ್ ಸೇರಿದಂತೆ ಕೇದಾರನಾಥ ಮಾರ್ಗದ ಹಳ್ಳಿಗಳು ಸಹ ಈ ಚಟುವಟಿಕೆಯಲ್ಲಿ ಭಾಗಿಯಾಗಿವೆ. ಅಲ್ಲಿ ಪ್ರವಾಸಿಗರು ಆಗಾಗ್ಗೆ ಖಾಲಿ ಬಾಟಲಿಗಳನ್ನು ಎಸೆಯುತ್ತಾರೆ. ಪುರಸಭೆಯು ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಟ್ಟಿಗೆಗಳಾಗಿ ಪರಿವರ್ತಿಸುತ್ತದೆ ಮತ್ತು ನಂತರ ಅವುಗಳನ್ನು ಮಾರಾಟ ಮಾಡುತ್ತದೆ.
ಗೋಪೇಶ್ವರ ಮುನ್ಸಿಪಲ್ ಕಾರ್ಪೋರೇಶನ್ ಜೋಶಿಮಠದಿಂದ ಪಾಂಡುಕೇಶ್ವರದವರೆಗೆ, ಬದರಿನಾಥ ಯಾತ್ರಾ ಮಾರ್ಗದ ಪ್ರಮುಖ ನಿಲ್ದಾಣ, ಜೊತೆಗೆ ಹೇಮಕುಂಡ್ ಸಾಹಿಬ್ ಮತ್ತು ವ್ಯಾಲಿ ಆಫ್ ಫ್ಲವರ್ಸ್ ಮಾರ್ಗಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.
ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಯಾತ್ರಾ ವಿಭಾಗದ ಅಂಕಿ-ಅಂಶಗಳ ಪ್ರಕಾರ, ಶುಕ್ರವಾರದವರೆಗೆ 26.5 ಲಕ್ಷ ಯಾತ್ರಿಕರು ಚಾರ್ ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಯಾತ್ರಾ ಇಲಾಖೆಯ ವಕ್ತಾರರಾದ ಪ್ರದೀಪ್ ಚೌಹಾಣ್ ಮಾತನಾಡಿ, "ಶುಕ್ರವಾರ ಸಂಜೆಯ ವೇಳೆಗೆ 950,000 ಯಾತ್ರಿಕರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದರು ಮತ್ತು 700,000 ಕ್ಕೂ ಹೆಚ್ಚು ಜನರು ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ" ಎಂದು ಹೇಳಿದ್ದಾರೆ.
"ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವುದರಿಂದ ಆದಾಯವನ್ನು ಗಳಿಸುವುದರ ಜೊತೆಗೆ, ಪರಿಸರವನ್ನು ಸಂರಕ್ಷಿಸುವಲ್ಲಿ ಗಮನಾರ್ಹ ಸವಾಲು ಉಳಿದಿದೆ, ಏಕೆಂದರೆ ಪ್ರತಿದಿನ ಸರಾಸರಿ 75,000 ಯಾತ್ರಿಕರು ಚಾರ್ ಧಾಮ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡುತ್ತಾರೆ ಎಂದು ಪರಿಸರ ಕಾರ್ಯಕರ್ತ ಚಂದನ್ ನಾಯಲ್ ಹೇಳಿದ್ದಾರೆ.
Advertisement