
ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಜಾಗರಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲ್ಗರ್ ಮತ್ತು ಟೇಕುಲಗುಡೆಂ ನಡುವೆ ನಕ್ಸಲೀಯರು ನಡೆಸಿದ IED ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಯೋಧರು ಭಾನುವಾರ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರನ್ನು ಕೇರಳದ ತಿರುವನಂತಪುರಂ ಮೂಲದ ಆರ್ ವಿಷ್ಣು (35) ಮತ್ತು ಉತ್ತರ ಪ್ರದೇಶದ ಕಾನ್ಪುರ ಮೂಲದ ಶೈಲೇಂದ್ರ (29) ಎಂದು ಗುರುತಿಸಲಾಗಿದೆ.
ಈ ಯೋಧರು ಕೋಬ್ರಾ 201 ಬೆಟಾಲಿಯನ್‌ನ ಭಾಗವಾಗಿದ್ದರು. ಇದು ಗೆರಿಲ್ಲಾ ಮತ್ತು ಅರಣ್ಯದಲ್ಲಿ ಯುದ್ಧದ ಕಾರ್ಯಾಚರಣೆಗಳನ್ನು ಕೈಗೊಳ್ಳಲು ರಚಿಸಲಾದ ವಿಶೇಷ ಪಡೆಯಾಗಿದ್ದು, ನಿರ್ದಿಷ್ಟವಾಗಿ ಮಾವೋವಾದಿ ದಂಗೆ ಹತ್ತಿಕ್ಕಲು ರೂಪಿಸಲಾಗಿದೆ.
ಇಂದು ಮಧ್ಯಾಹ್ನ 3 ಗಂಟೆಯಲ್ಲಿ ಈ ಯೋಧರು ಸಿಲ್ಗರ್ ಕ್ಯಾಂಪ್ ನಿಂದ ಟೇಕಲ್‌ಗುಡೆಮ್ ನಡುವಣ ರಸ್ತೆ ತೆರೆಯುವ ಕರ್ತವ್ಯದಲ್ಲಿದ್ದಾಗ ನಕ್ಸಲೀಯರು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ- IED ಸ್ಫೋಟಿಸಿದ್ದು, ಇಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಭದ್ರತಾ ಪಡೆಗಳಿಗೆ ಹಾನಿಯಾಗುವಂತೆ ಸಿಲ್ಗರ್ ಕ್ಯಾಂಪ್ ನಿಂದ ಟೇಕಲ್‌ಗುಡೆಮ್‌ಗೆ ಹೋಗುವ ಮಾರ್ಗದಲ್ಲಿ ನಕ್ಸಲೀಯರು ಬಾಂಬ್ ಇಟ್ಟಿದ್ದರು ಎನ್ನಲಾಗಿದೆ. ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ.
ಈ ಮಧ್ಯೆ ಭದ್ರತಾ ಪಡೆಗಳು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರಿಗೆ ಸೇರಿದ ನಕಲಿ ನೋಟುಗಳು ಮತ್ತು ಅವುಗಳನ್ನು ಮುದ್ರಿಸಲು ಬಳಸಿದ ಉಪಕರಣಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜೂನ್ 17 ರಂದು ಜಾರ್ಖಂಡ್‌ನ ಚೈಬಾಸಾದಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹತ್ಯೆಗೈದು ಇಬ್ಬರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement